ತಾಯ್ತನದ ಬಳಿಕ ತೂಕ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಬಾಡಿ ಶೇಮಿಂಗ್ ಹಾಗೂ ಕೀಳುಮಟ್ಟದ ಟ್ರೋಲ್‌ಗೆ ಗುರಿಯಾಗುತ್ತಿದ್ದ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ತಮ್ಮ ವಸ್ತ್ರವಿನ್ಯಾಸದ ಮೂಲಕವೇ ಟ್ರೋಲಿಗರಿಗೆ ಬಿಸಿಮುಟ್ಟಿಸಿದ್ದಾರೆ.
‘ರೈಸ್ ಆಂಡ್ ಫಾಲ್ ಸೀಸನ್ 2’ (Rise and Fall Season 2) ಪ್ರೀಮಿಯರ್ ಸಮಾರಂಭದಲ್ಲಿ ನೇರಳೆ ಬಣ್ಣದ (Purple) ಸೀರೆಯನ್ನುಟ್ಟು ಹಾಜರಾಗಿದ್ದ ಸ್ವರಾ, ತಮ್ಮ ಬ್ಲೌಸ್ ಮೇಲೆ ಎದ್ದು ಕಾಣುವಂತೆ ‘ಮೋಟಿ’ (Moti - ದಪ್ಪಗಿರುವಾಕೆ) ಎಂದು ಬರೆಸಿಕೊಂಡಿದ್ದರು. ಇದು ಎಲ್ಲರ ಗಮನ ಸೆಳೆದಿದ್ದು, ಆನ್‌ಲೈನ್‌ನಲ್ಲಿ ಹೀಯಾಳಿಸುತ್ತಿದ್ದವರಿಗೆ ಅವರು ನೀಡಿದ ಖಡಕ್ ಉತ್ತರ ಎಂದು ಪ್ರಶಂಸಿಸಲಾಗುತ್ತಿದೆ.
ಮೂರು ವರ್ಷಗಳಿಂದ ಎದುರಿಸಿದ ಕೀಳು ಟ್ರೋಲ್‌ಗಳು:
ತಮ್ಮ ಮೇಲಾದ ವ್ಯಂಗ್ಯಗಳ ಬಗ್ಗೆ ನೇರವಾಗಿ ಮಾತನಾಡಿದ ಸ್ವರಾ, "ನನ್ನ ಮಗಳಿಗೆ ಈಗ ಮೂರು ವರ್ಷ. ಮಗಳು ಹುಟ್ಟಿದಾಗಿನಿಂದಲೂ ಅಪರಿಚಿತರು ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಹೀಯಾಳಿಸುತ್ತಿದ್ದಾರೆ. 'ದಪ್ಪಗಾಗಿದ್ದಾಳೆ', 'ಎಮ್ಮೆಯಂತಾಗಿದ್ದಾಳೆ', 'ಹಸುವಾಗಿದ್ದಾಳೆ', 'ಹಿಪ್ಪೋ ಹಾಗೂ ಆನೆಯಂತಾಗಿದ್ದಾಳೆ' ಎಂದೆಲ್ಲಾ ಅತ್ಯಂತ ಕೆಟ್ಟದಾಗಿ ಕಾಮೆಂಟ್ ಮಾಡಿದರು. ಅದಕ್ಕೆ ನಾನು ಹೌದು, ನಾನೀಗ ಅದೆಲ್ಲವೂ ಆಗಿದ್ದೇನೆ ಎಂದು ನಿಮ್ಮ ಆ ಎಲ್ಲಾ ಟೀಕೆಗಳನ್ನು ನಾನೇ ಸ್ವೀಕರಿಸಿ, ಹೆಮ್ಮೆಯಿಂದ ಒಪ್ಪಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ಬಾಡಿ ಶೇಮಿಂಗ್ ವಿರುದ್ಧ ಜಾಗೃತಿ:
ಕೇವಲ ಸ್ವರಾ ಭಾಸ್ಕರ್ ಮಾತ್ರವಲ್ಲದೆ, ಇತ್ತೀಚೆಗೆ ಗಣೇಶ ಚತುರ್ಥಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನಟಿ ಕತ್ರಿನಾ ಕೈಫ್ ಕೂಡ ಹೆರಿಗೆ ನಂತರದ ತೂಕ ಹೆಚ್ಚಳದ ಕಾರಣಕ್ಕೆ ಟ್ರೋಲಿಗರ ಕೆಟ್ಟ ಕಾಮೆಂಟ್‌ಗಳಿಗೆ ಗುರಿಯಾಗಿದ್ದರು.
ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ, ಹೊಸ ಜೀವಿಗಾಗಿ ಪಡುವ ಕಷ್ಟ-ತ್ಯಾಗಗಳು ಹಾಗೂ ಶಾರೀರಿಕ ಬದಲಾವಣೆಗಳು ಸಹಜ. ಇಂತಹ ಸೂಕ್ಷ್ಮತೆಯನ್ನು ಅರಿಯದೆ ಮಹಿಳೆಯರ ತೂಕವನ್ನು ಹೀಯಾಳಿಸುವ ಸಂಸ್ಕೃತಿಯ ನಡುವೆ, ಸ್ವರಾ ಭಾಸ್ಕರ್ ತಮ್ಮ ದೇಹದ ಬದಲಾವಣೆಯನ್ನು ಸಂಭ್ರಮಿಸಿ ‘ಮೋಟಿ’ ಬ್ಲೌಸ್ ಧರಿಸಿರುವುದು ಎಲ್ಲ ಮಹಿಳೆಯರಲ್ಲಿ ತಮ್ಮ ದೇಹದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸುವಂತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
