ಹಲ್ದ್ವಾನಿ ಘಟನೆಯನ್ನು ತೀವ್ರವಾಗಿ ಖಂಡಿಸಿದ ಮಲ್ಲಿಕಾರ್ಜುನ್ ಖರ್ಗೆ; ದಲಿತರ ಮೇಲಿನ ತಾರತಮ್ಯ ಎಂದ ಕಾಂಗ್ರೆಸ್ ಸೂಪ್ರೀಮೋ!
ನವದೆಹಲಿ:
ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸಿದ ನಂತರ, ಆ ವೇದಿಕೆಯನ್ನು ಶುದ್ಧೀಕರಣ ಮಾಡಿರುವ ಆಘಾತಕಾರಿ ಘಟನೆ ನಡೆದಿದ್ದು, ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸಿ ಜೈಲಿಗಟ್ಟಬೇಕು ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯಸಭೆ ಕಲಾಪದಲ್ಲಿ ಪ್ರಸ್ತಾಪಿಸಿದ ಖರ್ಗೆ, ವೇದಿಕೆಯನ್ನು ಪವಿತ್ರಗೊಳಿಸುವ ನೆಪದಲ್ಲಿ ತಮಗೆ ಭಾರಿ ಅವಮಾನ ಮಾಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
"ನನ್ನ ರಕ್ಷಣೆಗೆ ಯಾರ ಬಳಿಯೂ ಬೇಡುವುದಿಲ್ಲ, ಹೋರಾಡುವ ಶಕ್ತಿ ನನಗಿದೆ":
ಸಂಸತ್ತಿನಲ್ಲಿ ಸುದೀರ್ಘವಾಗಿ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, "ಈ ವಿಚಾರವನ್ನು ರಾಜಕೀಯಗೊಳಿಸುವುದು ನನ್ನ ಉದ್ದೇಶವಲ್ಲ. ನಾನು ದಲಿತ ಸಮುದಾಯಕ್ಕೆ ಸೇರಿದವನು, ನನ್ನನ್ನು ರಕ್ಷಿಸಿ ಎಂದು ನಾನು ಯಾರ ಬಳಿಯೂ ಕೈಚಾಚಿ ಬೇಡಿಲ್ಲ. ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ನನಗೆ ಖಂಡಿತ ಇದೆ. ಆದರೆ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಾನು ಭಾಷಣ ಮಾಡಿ ಹೋದ ಬಳಿಕ ವೇದಿಕೆಯನ್ನು ಶುದ್ಧೀಕರಿಸಿರುವುದು ಇಡೀ ದಲಿತ ಸಮುದಾಯಕ್ಕೆ ಮಾಡಿದ ಘೋರ ಅವಮಾನ" ಎಂದು ಬೇಸರ ವ್ಯಕ್ತಪಡಿಸಿದರು.
ಹಲ್ದ್ವಾನಿಯಲ್ಲಿ ಈ ಮನುಷ್ಯತ್ವ ರಹಿತ ಕೃತ್ಯ ಎಸಗಿದವರ ವಿರುದ್ಧ ಅಸ್ಪೃಶ್ಯತಾ ತಡೆ ಕಾಯ್ದೆಯಡಿ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
"ಬಿಜೆಪಿ ಜಾತಿಯ ಆಧಾರದಲ್ಲಿ ದೇಶವನ್ನು ವಿಭಜಿಸುತ್ತಿದೆ":
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. "ಈ ದೇಶದಲ್ಲಿ ದಲಿತರಿಗೆ ಇಂದಿಗೂ ಸೂಕ್ತ ಗೌರವ, ಸ್ಥಾನಮಾನವಿಲ್ಲ ಎಂಬುದಕ್ಕೆ ಈ ಘಟನೆಯೇ ಉದಾಹರಣೆ. ರಾಮಲೀಲಾ ಮೈದಾನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೂ ಸಾರ್ವಜನಿಕ ಸಮಾವೇಶಗಳನ್ನು ನಡೆಸುತ್ತಾರೆ. ಹಾಗಿರುವಾಗ ನಾನು ಭಾಷಣ ಮಾಡಿದ ತಕ್ಷಣವೇ ಅಲ್ಲಿ ಶುದ್ಧೀಕರಣ ಮಾಡುವ ಅಗತ್ಯವೇನಿತ್ತು? ದೇಶವನ್ನು ಜಾತಿಗಳ ಆಧಾರದ ಮೇಲೆ ಒಡೆದು ಆಳಲು ಬಿಜೆಪಿ ಯತ್ನಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಖಂಡಿಸಿದರು.
ಬಿಜೆಪಿಯ ನಾಯಕರ ಮಾತಿಗೂ ಮತ್ತು ನಡತೆಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಸಿದ ಅವರು, ಕರಾವಳಿ ಹಾಗೂ ಇಡೀ ದೇಶದ ಜನತೆ ಇಂತಹ ದಮನಕಾರಿ ಮನಸ್ಥಿತಿಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದರು.
