ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಉಳ್ಳಾಲ: ಇನ್ಫೋಸಿಸ್ ಉದ್ಯೋಗಿಗಳ ಸೋಗಿನಲ್ಲಿ ಬಂದ ಖದೀಮರು; ವೃದ್ಧೆಯ ಬಾಯಿ ಮುಚ್ಚಿ 3 ಲಕ್ಷದ ಚಿನ್ನ ದರೋಡೆ!



ಮಂಗಳೂರು:ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಬಂದು ವೃದ್ಧೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಬರೋಬ್ಬರಿ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಕಾಯರಗೋಳಿಯಲ್ಲಿ ನಡೆದಿದೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಘಾತಕಾರಿ ಘಟನೆ ಸಂಭವಿಸಿದ್ದು, ಸ್ಥಳೀಯ ನಿವಾಸಿ ಭವಾನಿ ಎಂಬುವವರು ದೂರು ನೀಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಆಗಸ್ಟ್ 3 ರಂದು ಮಧ್ಯಾಹ್ನ ಸುಮಾರು 1:15 ವೇಳೆಗೆ ಭವಾನಿ ಅವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಮುಂಭಾಗದ ಬಾಗಿಲನ್ನು ಯಾರೋ ತಟ್ಟಿದ್ದಾರೆ. ಬಾಗಿಲು ತೆರೆದು ನೋಡಿದಾಗ ಮೆಟ್ಟಿಲಿನ ಬಳಿ ಇಬ್ಬರು ಅಪರಿಚಿತ ಯುವಕರು ನಿಂತಿದ್ದರು.

ತಮ್ಮನ್ನು "ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿಗಳು, ಬ್ರಾಹ್ಮಣರು" ಎಂದು ಪರಿಚಯಿಸಿಕೊಂಡ ಯುವಕರು, "ಇಲ್ಲಿ ಬಾಡಿಗೆಗೆ ಮನೆ ಇದೆಯೇ, ಇಲ್ಲಿ ಶಾಕಾಹಾರ ಮಾತ್ರ ಅಲ್ಲವೇ?" ಎಂದು ವಿಚಾರಿಸಿದ್ದಾರೆ. ಅದಕ್ಕೆ ಭವಾನಿ ಅವರು ತಮ್ಮ ಮಗನಲ್ಲಿ ಕೇಳಿ ತಿಳಿಸುವುದಾಗಿ ಹೇಳಿ, ಮಗನ ಮೊಬೈಲ್ ಸಂಖ್ಯೆ ಕೇಳಿದಾಗ ಫೋನ್ ಸ್ವಿಚ್ ಆಫ್ ಆಗಿದೆ ಎಂದಿದ್ದಾರೆ. ಬಳಿಕ ಬಾಗಿಲು ಮುಚ್ಚಿ ಒಳಗೆ ಹೋಗಲು ಯತ್ನಿಸಿದ್ದಾರೆ.

ಮನೆಗೆ ನುಗ್ಗಿ ಬಲವಂತದ ಲೂಟಿ:

ಆಗ ಏಕಾಏಕಿ ಬಾಗಿಲನ್ನು ಬಲವಾಗಿ ದೂಡಿದ ಆರೋಪಿಗಳು ಮನೆಗೆ ಅಕ್ರಮವಾಗಿ ನುಗ್ಗಿದ್ದಾರೆ. ಪರಿಣಾಮ ಭವಾನಿ ಅವರು ಹಾಲ್ನಲ್ಲಿ ಕೆಳಗೆ ಬಿದ್ದು ಕಿರುಚಾಡಲು ತೊಡಗಿದ್ದಾರೆ. ತಕ್ಷಣವೇ ಒಬ್ಬ ಖದೀಮ ವೃದ್ಧೆಯ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಒತ್ತಿ ಹಿಡಿದರೆ, ಮತ್ತೊಬ್ಬ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾನೆ.

ಬಳಿಕ ಬಾಯಿ ಒತ್ತಿ ಹಿಡಿದಿದ್ದ ವ್ಯಕ್ತಿಯು ಆಕೆಯ ಬಲಕೈಯಲ್ಲಿದ್ದ 8 ಗ್ರಾಂ ತೂಕದ ಬಂಗಾರದ ಬಳೆಯನ್ನು ಕಳಚಿದ್ದಾನೆ. ಎಡಕೈಯಲ್ಲಿದ್ದ ಮತ್ತೊಂದು ಬಳೆಯನ್ನು ಕಳಚಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ವೇಳೆ ನಡೆದ ತಳ್ಳಾಟದಲ್ಲಿ ವೃದ್ಧೆಯ ಮಣಿಗಂಟು ಹಾಗೂ ಕೈಗೆ ಗಾಯಗಳಾಗಿವೆ.

ಚಿಲಕ ಹಾಕಿ ಎಸ್ಕೇಪ್:

ಆಭರಣಗಳನ್ನು ದೋಚಿದ ದರೋಡೆಕೋರರು ವೃದ್ಧೆಯನ್ನು ಒಳಗಿರಿಸಿ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ. ಸುಮಾರು ಅರ್ಧ ಗಂಟೆಯ ನಂತರ ಮನೆಗೆ ಬಂದ ಮಗಳು ಪ್ರತಿಭಾ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ದೋಚಲಾದ ಚಿನ್ನದ ಸರ ಹಾಗೂ ಬಳೆಯ ಒಟ್ಟು ತೂಕ 24 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ 3 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ