ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

ಸುಪ್ರೀಂ ಕೋರ್ಟ್ ಅರೆಸ್ಟ್ ವಾರಂಟ್ ಭೀತಿ: ಮಂಗಳೂರಿನಲ್ಲಿ ಹಿರಿಯ ನಾಗರಿಕೆಗೆ 34.48 ಲಕ್ಷ ರೂ. ಡಿಜಿಟಲ್ ಅರೆಸ್ಟ್ ವಂಚನೆ!

 


ಮಂಗಳೂರು:ಮಂಗಳೂರಿನಲ್ಲಿ ಮತ್ತೊಂದು ಭಾರಿ ಪ್ರಮಾಣದ 'ಡಿಜಿಟಲ್ ಅರೆಸ್ಟ್' (Digital Arrest) ಆನ್ಲೈನ್ ದರೋಡೆ ಬೆಳಕಿಗೆ ಬಂದಿದೆ. ಸಿಮ್ ಕಾರ್ಡ್ ದುರ್ಬಳಕೆ ಹಾಗೂ ಅಕ್ರಮ ಹಣ ವರ್ಗಾವಣೆಯ ಹೆಸರಿನಲ್ಲಿ 66 ವರ್ಷದ ಹಿರಿಯ ನಾಗರಿಕೆಯನ್ನು ಬೆದರಿಸಿದ ಸೈಬರ್ ಕಳ್ಳರು ಬರೋಬ್ಬರಿ 34,48,094 ರೂಪಾಯಿ ದೋಚಿದ್ದಾರೆ.

ಜುಲೈ 10 ರಂದು ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು 'ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ'ದ ಅಧಿಕಾರಿ ಅಮನ್ ಕುಮಾರ್ ಶರ್ಮ ಎಂದು ಪರಿಚಯಿಸಿಕೊಂಡಿದ್ದಾನೆ. "ನಿಮ್ಮ ಐಡಿ ಬಳಸಿ ಯಾರೋ ಅಪರಿಚಿತರು ಸಿಮ್ ಕಾರ್ಡ್ ಪಡೆದು ಸೈಬರ್ ಕ್ರೈಮ್ ಎಸಗಿದ್ದಾರೆ. ಇದನ್ನು ರದ್ದು ಮಾಡಲು ಕೊಲಬಾ (ಮುಂಬೈ) ಪೊಲೀಸ್ ಠಾಣೆಗೆ ಮಾತನಾಡಿ" ಎಂದು ಹೇಳಿ ಕಾಲ್ ಕನೆಕ್ಟ್ ಮಾಡಿದ್ದಾನೆ.

ಬಳಿಕ ಕೊಲಬಾ ಪೊಲೀಸರಂತೆ ನಟಿಸಿದ ವಂಚಕರು, "ನಿಮ್ಮ ಐಡಿ ಬಳಸಿ ಒ.ಎಂ. ಅಬ್ದುಲ್ ಸಲಾಮ್ ಎಂಬಾತ ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆದು 2 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾನೆ. ಅದರಲ್ಲಿ ನಿಮಗೆ 20 ಲಕ್ಷ ರೂ. ಕಮಿಷನ್ ಬಂದಿದೆ. ಈ ಸಂಬಂಧ ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ನಿಂದ 'ಅರೆಸ್ಟ್ ವಾರಂಟ್' ಜಾರಿಯಾಗಿದೆ" ಎಂದು ಸುಳ್ಳು ಹೇಳಿ ಹೆದರಿಸಿದ್ದಾರೆ.

ಆರ್ಬಿಐ ತಪಾಸಣೆ ಹೆಸರಿನಲ್ಲಿ ಲೂಟಿ:

ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಆರ್ಬಿಐ (RBI) ಖಾತೆಗೆ ವರ್ಗಾಯಿಸಿ ಪರಿಶೀಲನೆಗೆ ಒಳಪಡಿಸಬೇಕು. ತಪಾಸಣೆ ಮುಗಿದ ನಂತರ ಹಣವನ್ನು ವಾಪಸ್ ನೀಡಲಾಗುವುದು ಎಂದು ನಂಬಿಸಿದ್ದಾರೆ. ಈ ಮಾತನ್ನು ನಿಜವೆಂದು ನಂಬಿದ ಹಿರಿಯ ನಾಗರಿಕರು ಜುಲೈ 12 ರಿಂದ ಜುಲೈ 27 ರ ನಡುವೆ ಹಂತ ಹಂತವಾಗಿ ಒಟ್ಟು 34.48 ಲಕ್ಷಕ್ಕೂ ಅಧಿಕ ಹಣವನ್ನು RTGS ಮೂಲಕ ವಂಚಕರ ಖಾತೆಗೆ ಜಮೆ ಮಾಡಿದ್ದಾರೆ.

ಹಣ ಕೈಸೇರಿದ ನಂತರ ವಂಚಕರು ಫೋನ್ ಕರೆ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಅನುಮಾನಗೊಂಡು ಪರಿಚಯಸ್ಥರ ಬಳಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ.

ಘಟನೆ ಸಂಬಂಧ ಬಾಧಿತ ಹಿರಿಯ ನಾಗರಿಕರು ನೀಡಿದ ದೂರಿನ ಮೇರೆಗೆ ಮಂಗಳೂರು ನಗರದ ಸಿಇಎನ್ (CEN) ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.