ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ- ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪುತ್ರ ಅರೆಸ್ಟ್


ಹೈದರಾಬಾದ್​​: ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಹಾಗೂ ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ತೆಲಂಗಾಣ ಹೈಕೋರ್ಟ್​​ ನಿರಾಕರಿಸಿದ ಕೆಲವೇ ಗಂಟೆಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಪುತ್ರನನ್ನು ತನಿಖೆಗೆ ತಾವೇ ಪೊಲೀಸರಿಗೆ ಒಪ್ಪಿಸಿದ್ದಾಗಿ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದು, 17 ವರ್ಷದ ಬಾಲಕಿಗೆ ಕಿರುಕುಳ ನೀಡಿರುವ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ 25 ವರ್ಷದ ಭಗೀರಥ್ ಸಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು.


ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿರುವ ಬಂಡಿ ಸಂಜಯ್ ಕುಮಾರ್, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆ ನನ್ನದು ಎಂದು ಹೇಳಿದ್ದಾರೆ. ಕಾನೂನು ಮತ್ತು ನ್ಯಾಯಾಂಗದ ಮೇಲೆ ಅತ್ಯಂತ ಗೌರವದಿಂದ, ನನ್ನ ಪುತ್ರ ಬಂಡಿ ಭಗೀರಥ್ ನಮ್ಮ ವಕೀಲರ ಮೂಲಕ ತೆಲಂಗಾಣ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿದ್ದಾರೆ. ನನ್ನ ಸ್ವಂತ ಮಗನಾಗಲಿ ಅಥವಾ ಸಾಮಾನ್ಯ ನಾಗರಿಕನಾಗಲಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ನಾನು ಹಿಂದೆಯೂ ಹೇಳಿದ್ದೇನೆ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ನಿರಂತರವಾಗಿ ಹೇಳುತ್ತಿದ್ದಾನೆ. ನಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಕಾನೂನು ತಜ್ಞರ ಮುಂದೆ ಇಟ್ಟಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.


ಅಲ್ಲದೆ ನ್ಯಾಯ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯ ತಡವಾಗಬಹುದು, ಆದರೆ ನಿರಾಕರಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಶುಕ್ರವಾರ ಮಧ್ಯರಾತ್ರಿ ತನಕ ನಡೆದ ವಿಚಾರಣೆಯಲ್ಲಿ, ತೆಲಂಗಾಣ ಹೈಕೋರ್ಟ್ ಸಾಯಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿತ್ತು. ಸಾಯಿ ಪರ ವಕೀಲರು ಪ್ರಕರಣದ ದೂರುದಾರೆಯಾದ ಬಾಲಕಿಯ ತಾಯಿ, ತನ್ನ ಮಗಳು ಕಳೆದ ವರ್ಷದಿಂದ ಸಾಯಿಯೊಂದಿಗೆ ಸಂಬಂಧದಲ್ಲಿದ್ದು, ಅದು ಪರಸ್ಪರ ಸೌಹಾರ್ದಯುತವಾಗಿತ್ತು ಎಂದು ಹೇಳಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಸಂತ್ರಸ್ತೆಯ ಪರ ವಕೀಲರು ಜಾಮೀನು ಅರ್ಜಿಯನ್ನು ತೀವ್ರವಾಗಿ ವಿರೋಧಿಸಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಟಿ. ಮಾಧವಿ ದೇವಿಯವರು ಈ ಹಂತದಲ್ಲಿ ಯಾವುದೇ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದಿದ್ದರು.



ಆದರೆ ಭಗೀರಥ್ ಸಾಯಿ ಇದೊಂದು ಹನಿಟ್ರ್ಯಾಪ್ ಯತ್ನ ಎಂದು ಆರೋಪಿಸಿದ್ದಾನೆ. ಬಾಲಕಿ ಹಾಗೂ ಆಕೆಯ ಪೋಷಕರು ಮದುವೆಯಾಗುವಂತೆ ತನ್ನ ಮೇಲೆ ಒತ್ತಡ ಹೇರಿ 5 ಕೋಟಿ ರೂ‌. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ತಾನು ಈ ಮೊದಲೇ ಪೊಲೀಸರನ್ನು ಸಂಪರ್ಕಿಸಿದ್ದಾಗಿ ತಿಳಿಸಿದ್ದಾನೆ.


BREAKING NEWS
Loading latest news...
Join our WhatsApp Channel Powered By : Online Pudu