ಬೆಳ್ತಂಗಡಿ: ಎರ್ಮಾಯಿ ಫಾಲ್ಸ್ ಬಳಿಯ ಕಾಡಿನಲ್ಲಿ ಅಪ್ರಾಪ್ತೆಯ ಅತ್ಯಾಚಾರ- ವಿವಾಹ ನಿಶ್ಚಯವಾಗಿದ್ದ ಯುವಕ ಸೇರಿ ಇಬ್ಬರು ಅರೆಸ್ಟ್


ಬೆಳ್ತಂಗಡಿ: ಅಪ್ರಾಪ್ತೆಯನ್ನು ಅತ್ಯಾಚಾರ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿವಾಹ ನಿಶ್ಚಯವಾಗಿದ್ದ ಯುವಕ ಸೇರಿದಂತೆ ಇಬ್ಬರನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಸುಮಂತ್ (28) ಮತ್ತು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನವನೀತ್ (26) ಬಂಧಿತ ಆರೋಪಿಗಳು.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ 15 ವರ್ಷದ ಅಪ್ರಾಪ್ತೆಯನ್ನು ಈ ಇಬ್ಬರು ಯುವಕರು ಪುಸಲಾಯಿಸಿ ಎ.16ರಂದು ಎರ್ಮಾಯಿ ಫಾಲ್ಸ್ ಬಳಿಯ ಕಾಡಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಇಬ್ಬರು ಸೇರಿ ಅತ್ಯಾಚಾರ ಮಾಡಿರುವ ಬಗ್ಗೆ ಮನೆಯವರಿಗೆ ಬಾಲಕಿ ತಿಳಿಸಿದ್ದು ಅದರಂತೆ ಪೋಷಕರು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಅತ್ಯಾಚಾರ ಎಸಗಿದ ಸುಮಂತ್ ಹಾಗೂ ನವನೀತ್‌ನನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿ.ಎಸ್ ನೇತೃತ್ವದ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ ಆರ್ ಗಾಣಿಗೇರ ತಂಡ ಕಾರ್ಯಚರಣೆ ನಡೆಸಿತ್ತು.

ಈ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾದ ಓರ್ವ ಆರೋಪಿ ಕಡಿರುದ್ಯಾವರ ಗ್ರಾಮದ ಸುಮಂತ್‌ಗೆ ಮೇ. 10ರಂದು ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಆತ ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿದ್ದಾನೆ.
BREAKING NEWS
Loading latest news...
Join our WhatsApp Channel Powered By : Online Pudu