ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ 32ವರ್ಷದ ಹರೀಶ್ ರಾಣಾ ಅವರಿಗೆ ಕುಟುಂಬಸ್ಥರು ಭಾವುಕ ವಿದಾಯ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹರೀಶ್ ರಾಣಾ ಕಣ್ಣು ಮಿಟುಕಿಸುವುದು ಮತ್ತು ಗಂಟಲಲ್ಲಿ ನುಂಗುವಂತೆ ಮಾಡುವ ದೃಶ್ಯಗಳು ಕಾಣುತ್ತಿವೆ. ಬ್ರಹ್ಮಕುಮಾರಿಸ್ ಸಂಸ್ಥೆಯ ಪ್ರತಿನಿಧಿಯೊಬ್ಬರು ಅವರ ಹಣೆಗೆ ತಿಲಕ ಹಚ್ಚಿ, "ಎಲ್ಲರನ್ನೂ ಕ್ಷಮಿಸಿ, ಶಾಂತಿಯಿಂದ ಹೊರಡು" ಎಂದು ಹೇಳುತ್ತಿರುವುದು ಹಾಗೂ ಪಕ್ಕದಲ್ಲೇ ತಾಯಿ ಭಾವುಕರಾಗಿ ಕುಳಿತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
2013ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹರೀಶ್ ರಾಣಾ ತಮ್ಮ ಪೇಯಿಂಗ್ ಗೆಸ್ಟ್ ವಸತಿಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಅವರ ಮೆದುಳಿಗೆ ತೀವ್ರ ಪೆಟ್ಟು ಬಿದ್ದಿದ್ದು ಕೋಮಾಗೆ ಹೋಗಿದ್ದರು. ಹಲವು ವರ್ಷಗಳ ಕಾಲ ಚಿಕಿತ್ಸೆ ನೀಡಿದರೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಲಿಲ್ಲ ಎಂದು ವೈದ್ಯರು ತಿಳಿಸಿದ್ದರು.
ಹರೀಶ್ ರಾಣಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದು, ಪ್ಯಾಸಿವ್ ಯೂಥನೇಷಿಯಾ ಮೂಲಕ ಗೌರವಯುತ ಮರಣ ಪಡೆಯಲು ಅನುಮತಿ ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶದ ಮೂಲಕ ಪ್ಯಾಸಿವ್ ಯೂಥನೇಷಿಯಾ ಅನುಮೋದಿಸಲಾದ ಪ್ರಕರಣವೆಂದು ಇದನ್ನು ಪರಿಗಣಿಸಲಾಗುತ್ತಿದೆ. ಮೊದಲ ತೀರ್ಪಿನ ಬಳಿಕ ಹರೀಶ್ ರಾಣಾ ಅವರನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ಯಾಲಿಯೇಟಿವ್ ಕೇರ್ ಘಟಕದಲ್ಲಿ ವೈದ್ಯಕೀಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ಅಂತಿಮ ಆರೈಕೆ ಪ್ರಕ್ರಿಯೆ ಆರಂಭಿಸಲಾಗಿದೆ.
ವೈದ್ಯರು ಹಂತ ಹಂತವಾಗಿ ಜೀವಾಧಾರ ಸಾಧನಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಮೂಲಕ ಹರೀಶ್ ರಾಣಾ ಕೊನೆಯುಸಿರೆಳೆದಿದ್ದಾರೆ. ಕಳೆದ 13ವರ್ಷಗಳಿಂದ ಹರೀಶ್ ರಾಣಾ ಸಂಪೂರ್ಣವಾಗಿ ವೈದ್ಯಕೀಯ ಸಾಧನಗಳ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದರು. ಆಹಾರ ಮತ್ತು ದೈಹಿಕ ಚಲನೆಗಳಿಗೂ ಯಂತ್ರಗಳಿಗೆ ಅವರು ಅವಲಂಬಿತರಾಗಿದ್ದರು.
ಏನಿದು ಪ್ಯಾಸಿವ್ ಯೂಥನೇಷಿಯಾ?
ದೀರ್ಘಕಾಲದಿಂದ ಕೋಮಾ ಸ್ಥಿತಿಯಲ್ಲಿ ಇರುವ ವ್ಯಕ್ತಿಗೆ ಗೌರವಯುತ ಮರಣಕ್ಕೆ ಅವಕಾಶ ನೀಡುವ ವೈದ್ಯಕೀಯ ಕ್ರಮವೇ ಯೂಥನೇಷಿಯಾ. ಪ್ಯಾಸಿವ್ ಯೂಥನೇಷಿಯಾ ಅಂದರೆ ರೋಗಿಯ ಜೀವ ಉಳಿಸಬಹುದಾದ ಚಿಕಿತ್ಸೆಯನ್ನು ಸ್ಥಗಿತಗೊಳಿಸುವುದು.
ಈ ಕುರಿತು ಮಾತನಾಡಿದ ಹರೀಶ್ ರಾಣಾ ಅವರ ತಂದೆ ಅಶೋಕ್ ರಾಣಾ, "ಈ ತೀರ್ಪು ನಮ್ಮ ಕುಟುಂಬಕ್ಕೆ ಯಾವುದೇ ವೈಯಕ್ತಿಕ ಲಾಭ ತರುವುದಿಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ಇರುವ ಅನೇಕ ಕುಟುಂಬಗಳಿಗೆ ಇದು ಸಹಾಯವಾಗಬಹುದು. ಒಬ್ಬ ತಂದೆಯಾಗಿ ಇದು ನನಗೆ ತುಂಬಾ ನೋವು ತಂದ ಸಂಗತಿ" ಎಂದು ಹೇಳಿದರು.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಹರೀಶ್ ರಾಣಾ ಅವರನ್ನು ಕುಟುಂಬದವರು ಅಪಾರ ಕಾಳಜಿಯಿಂದ ನೋಡಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಮತ್ತು ರಾಜ್ ನಗರ್ ಎಕ್ಸ್ಟೆನ್ಷನ್ ಎಒಎ ಸದಸ್ಯರು ಕುಟುಂಬದ ಸೇವೆಯನ್ನು ಪ್ರಶಂಸಿಸಿದ್ದಾರೆ.