ಕಡಬ: ತಂದೆ- ಮಗನ ನಡುವೆ ಜಗಳ; ಅಪ್ಪನಿಗೆ ಚೂರಿಯಿಂದ ಇರಿದು ಅಪ್ರಾಪ್ತ ಪುತ್ರ ಮುಖಕ್ಕೆ ಗುಂಡಿಕ್ಕಿ ಆತ್ಮಹತ್ಯೆ




ಕಡಬ: ತಂದೆ ಮತ್ತು ಅಪ್ರಾಪ್ತ ಪುತ್ರನ ನಡುವೆ ನಡೆದ ಜಗಳ ಪುತ್ರನ ಸಾವಿನಲ್ಲಿ ಅಂತ್ಯಗೊಂಡ ದಾರುಣ ಘಟನೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ (60) ಮತ್ತು ಅವರ ಪುತ್ರ ಮೋಕ್ಷ (17) ನಡುವೆ ಶನಿವಾರ ಸಂಜೆ ಜಗಳವಾಗಿತ್ತು. ಜಗಳದ ಬಳಿಕ ಮೋಕ್ಷ ತನಗೆ ತಾನೇ ಗುಂಡಿಕ್ಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೂಲತಃ ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಳಿಯಾಳು ನಿವಾಸಿ ವಸಂತ್‌ ಅಮೀನ್ ಹಾಗೂ ಜಯಶ್ರೀ ದಂಪತಿಯ ಏಕೈಕ ಪುತ್ರ ಮೋಕ್ಷ. ಸದ್ಯ ಇವರು ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ವಾಸವಿದ್ದಾರೆ. ಕೆಲ ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಆಸ್ತಿ ವಿಚಾರವಾಗಿ ಜಗಳವಾಗಿತ್ತು. ಇದರಿಂದ ಒಂದು ತಿಂಗಳ ಹಿಂದೆ ಪತ್ನಿ ತವರು ಮನೆ ಸೇರಿದ್ದರು ಎನ್ನಲಾಗಿದೆ.


ತಂದೆ ಮತ್ತು ಮಗ ಪಾದೆಯ ಮನೆಯಲ್ಲಿ ವಾಸವಿದ್ದು, ಶನಿವಾರ ಸಂಜೆ ಇವರೊಳಗೆ ಅದ್ಯಾವುದೋ ವಿಷಯಕ್ಕೆ ಜಗಳ ಉಂಟಾಗಿದೆ. ಈ ವೇಳೆ ತಂದೆ ವಸಂತ ಅಮೀನ್‌ರಿಗೆ ಪುತ್ರ ಮೋಕ್ಷ ಚೂರಿಯಿಂದ ಇರಿದಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಮೋಕ್ಷ ತನ್ನ ತಂದೆಯ ಹೆಸರಿನಲ್ಲಿ ಪರವಾನಿಗೆ ಹೊಂದಿರುವ ಎಸ್‌ಬಿಬಿ‌ಎಲ್ ಬಂದೂಕಿನಿಂದ ಮುಖಕ್ಕೆ ಗುಂಡಿಕ್ಕಿ ಮೃತಪಟ್ಟಿದ್ದಾನೆ.

ಈ ಮಧ್ಯೆ ತಂದೆಯೇ ಮಗನಿಗೆ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಆರೋಪಿಸಿ ವಸಂತ್ ಅಮೀನ್‌ರ ಪತ್ನಿ ಜಯಶ್ರೀ ಪೊಲೀಸ್ ದೂರು ನೀಡಿದ್ದು, ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವಸಂತ ಅಮೀನ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಕಾರಣಕ್ಕಾಗಿ ಜಗಳ ನಡೆದಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಬೆಳ್ತಂಗಡಿ ಉಪ ವಿಭಾಗದ ಡಿವೈಎಸ್ಪಿ ರೋಹಿಣಿ, ಉಪ್ಪಿನಂಗಡಿ ವೃತ್ತ ನಿರೀಕ್ಷಕರಾದ ನಾಗರಾಜ್, ಕಡಬ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಜಂಬೂರಾಜ್ ಮಹಾಜನ್, ಅಪರಾಧ ಸ್ಥಳ ತನಿಖಾಧಿಕಾರಿ ಅರ್ಪಿತಾ ಮತ್ತು ಕಾವ್ಯ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬ ಕಲಹದ ಹಿನ್ನೆಲೆಯಲ್ಲಿ ಮೋಕ್ಷ ತನ್ನ ತಂದೆ ವಸಂತ ಅಮೀನ್‌ರ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.