ಮಂಗಳೂರು: ಬಾಂಗ್ಲಾ ದೇಶಿಗನೆಂದು ಜಾರ್ಖಾಂಡ್ ವಲಸೆ ಕಾರ್ಮಿಕನಿಗೆ ಹಲ್ಲೆಗೈದ ಮೂವರು ಅಂದರ್




ಮಂಗಳೂರು: ಜಾರ್ಖಾಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾ ದೇಶೀಯನೆಂದು ಆರೋಪಿಸಿ ಹಲ್ಲೆಗೈದ ಮೂವರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೂಳೂರು ರಾಯಿಕಟ್ಟೆ ನಿವಾಸಿ ಸಾಗರ್ (24), ಕೂಳೂರು ನಾರಾಯಣಗುರು ಭಜನಾ ಮಂದಿರದ ಬಳಿಯ ನಿವಾಸಿಗಳಾದ ರತೀಶ್ ದಾಸ್ (32) ಮತ್ತು ಧನುಷ್ (24) ಬಂಧಿತ ಆರೋಪಿಗಳು.

ಮಂಗಳೂರಿನ ಕೂಳೂರು ಬಳಿ ಜ.11ರಂದು ಸಂಜೆ 6.05ರ ಸುಮಾರಿಗೆ ನಾಲ್ವರು ಆರೋಪಿಗಳು ಜಾರ್ಖಾಂಡ್ ಮೂಲದ ವಲಸೆ ಕಾರ್ಮಿಕ ದಿಲ್ಜಾನ್ ಅನ್ಸಾರಿ ಎಂಬವನನ್ನು ತಡೆದು ನಿಲ್ಲಿಸಿ "ನೀನು ಹಿಂದೂವಾ ಮುಸ್ಲಿಮನಾ'' ಎಂದು ದಬಾಯಿಸಿದ್ದಾರೆ. "ನೀನು ಬಾಂಗ್ಲಾ ದೇಶದನು" ಎಂದು ಅವಾಚ್ಯ ಶಬ್ದಗಳಿಂದ ಬೈದು ಆತನಲ್ಲಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವ ವಸ್ತುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಿಂದೂ ಮಹಿಳೆಯೊಬ್ಬರು ತಡೆದು ವಲಸೆ ಕಾರ್ಮಿಕನನ್ನು ರಕ್ಷಿಸಿದ್ದಾರೆ.

ಈ ಬಗ್ಗೆ ಕಾವೂರು ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.