30 ಸಾವಿರಕ್ಕೂ ಅಧಿಕ ಜನಸಮೂಹದ ಮುಂದೆ ಮೊಳಗಿದ ಏಕತೆ–ಸಮಾನತೆ ಸಂದೇಶ: ಆಳ್ವಾಸ್ನಲ್ಲಿ ಗಣರಾಜ್ಯೋತ್ಸವದ ವೈಭವ
ವಿದ್ಯಾಗಿರಿ: “ಕ್ರೀಯಾಶೀಲ ನ್ಯಾಯಾಂಗದಿಂದ ಸದೃಢ ಪ್ರಜಾಪ್ರಭುತ್ವ ಸಾಧ್ಯ. ಜಾತಿ–ಮತ ಮೀರಿದ ಬಾಂಧವ್ಯ ಮತ್ತು ಸಮಾನತೆಯೇ ದೇಶದ ಸುಭದ್ರತೆಯ ಅಡಿಪಾಯ,” ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.
ಅವರು ಸೋಮವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಬೃಹತ್ ವೇದಿಕೆಯಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
“ವೈವಿಧ್ಯತೆಯಲ್ಲಿ ಏಕತೆಯೇ ದೇಶದ ಶಕ್ತಿ. ಈ ಏಕತೆಯನ್ನು ಕಾಪಾಡುವಲ್ಲಿ ನ್ಯಾಯಾಲಯದ ಪಾತ್ರ ಅತ್ಯಂತ ಮಹತ್ವದ್ದು. ಕಾನೂನು ಉಲ್ಲಂಘನೆ, ಅರಾಜಕತೆ ಎದುರಾದಾಗ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆಗೆ ನ್ಯಾಯಾಂಗ ಬದ್ಧವಾಗಿದೆ,” ಎಂದು ಅವರು ವಿವರಿಸಿದರು.
ನ್ಯಾಯಾಲಯವು ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತದೆ. ಸಂವಿಧಾನವೇ ದೇಶದ ಪರಮಾಧಿಕಾರ ಮತ್ತು ನ್ಯಾಯಾಲಯ ಅದರ ಸಂರಕ್ಷಕ ಎಂದು ಅವರು ಹೇಳಿದರು.
“ಸ್ವಾತಂತ್ರ್ಯದ ಸದ್ಬಳಕೆಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆ ನಮ್ಮ ಸ್ವಾತಂತ್ರ್ಯದ ಮೂಲ ಮಂತ್ರಗಳು,” ಎಂದ ಅವರು 1930ರ ಉಪ್ಪಿನ ಸತ್ಯಾಗ್ರಹ ಹಾಗೂ 1942ರ ಕ್ವಿಟ್ ಇಂಡಿಯಾ ಚಳವಳಿಗಳನ್ನು ಉದಾಹರಿಸಿದರು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ನೀಡುವ ಆಲೋಚನೆಗೆ ಬಂದರು. 1946ರಲ್ಲಿಯೇ ಸಂವಿಧಾನ ರಚನೆ ಆರಂಭವಾಯಿತು. ಅದೇ ನಮ್ಮ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯ ಎಂದು ನ್ಯಾಯಮೂರ್ತಿ ಸಂದೇಶ್ ಹೇಳಿದರು.
ದೇಶದ ಸುವ್ಯವಸ್ಥೆ ಮತ್ತು ಬೆಳವಣಿಗೆ ಆರೋಗ್ಯ ಹಾಗೂ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಈ ಕ್ಷೇತ್ರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಅನನ್ಯ ಸಾಧನೆ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಬದುಕಿನ ಯಶಸ್ಸಿಗೆ ಸ್ವಾಮಿ ವಿವೇಕಾನಂದರು ನೀಡಿದ ಶಿಸ್ತು, ಶ್ರಮ, ಆತ್ಮವಿಶ್ವಾಸ, ಸಮಯಪ್ರಜ್ಞೆ ಮತ್ತು ನಿರ್ಭಯತೆ ಎಂಬ ಪಂಚಸೂತ್ರಗಳನ್ನು ಜೀವನದಲ್ಲಿ ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಸನ್ನಡತೆ ಮತ್ತು ಬಾಂಧವ್ಯ ಹೊಂದಿದ ನಾಗರಿಕ ಸಮಾಜದಿಂದಲೇ ಯಶಸ್ಸು ಸಾಧ್ಯ. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸಮಾನತೆಯೇ ನಮ್ಮ ಐಕ್ಯ ಮಂತ್ರ ಎಂದು ಅವರು ವಿಶ್ಲೇಷಿಸಿದರು.
.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ–ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿದಂತೆ 30,000ಕ್ಕೂ ಅಧಿಕ ಜನಸಮೂಹ ರಾಷ್ಟ್ರಭಕ್ತಿಯ ಕಹಳೆ ಮೊಳಗಿಸಿತು.
ಇದಕ್ಕೂ ಮೊದಲು ‘ವಂದೇ ಮಾತರಂ’ ಮೊಳಗಿದ ಬಳಿಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತ್ರಿವರ್ಣ ಧ್ವಜಾರೋಹಣ ಮಾಡಿದರು. ನಂತರ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಲಾಯಿತು. ಎಲ್ಲರೂ ಗೌರವ ಸಲ್ಲಿಸಿದರು.
ವೇದಿಕೆಯ ಬಾನೆತ್ತರದಲ್ಲಿ ತಿರಂಗಾ ಹಾರಾಡಿದರೆ, ಸಭಾಂಗಣದಲ್ಲಿ ನಿಂತ ವಿದ್ಯಾರ್ಥಿಗಳು ತ್ರಿವರ್ಣದಲ್ಲಿ ‘Bharath’ ಮೂಡಿಸುವ ಮೂಲಕ ದೇಶಪ್ರೇಮ ಸಾರಿದರು. ಆಳ್ವಾಸ್ ಸಂಸ್ಥೆಯ 6,257 ವಿದ್ಯಾರ್ಥಿಗಳು ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ಭಾರತವನ್ನು ರೂಪಿಸಿದರು.
ಸಾಂಸ್ಕೃತಿಕ ಗಾಯನ ತಂಡವು ‘ಕೋಟಿ ಕಂಠೋಸೇ’ ಗೀತೆಯನ್ನು ಹಾಡಿದಾಗ, ಸಭಾಂಗಣದಲ್ಲಿ ಸೇರಿದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ತ್ರಿವರ್ಣ ಧ್ವಜ ಬೀಸಿ ದೇಶಭಕ್ತಿಯನ್ನು ಪ್ರದರ್ಶಿಸಿದರು. ತ್ರಿವರ್ಣ ಸಿಂಹ ವೇಷ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು.
ಆವರಣದಾದ್ಯಂತ ಕೇಸರಿ–ಬಿಳಿ–ಹಸಿರು ವರ್ಣ ಸಂಭ್ರಮಿಸಿತು. ಸುಮಾರು 300ಕ್ಕೂ ಅಧಿಕ ಮಾಜಿ ಸೈನಿಕರು ಧ್ವಜಕ್ಕೆ ವಂದನೆ ಸಲ್ಲಿಸಿದರು. ಬಾನಂಗಳಕ್ಕೆ ತ್ರಿವರ್ಣ ಬಣ್ಣದ ರಂಗು ಬ್ಲೋವರ್ ಮೂಲಕ ಚಿಮ್ಮಿತು.
ಆರಂಭದಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ ಅವರಿಂದ ಗೌರವ ಶ್ರೀರಕ್ಷೆ ಸ್ವೀಕರಿಸಿದ ನ್ಯಾಯಮೂರ್ತಿ, ಬ್ಯಾಂಡ್ ಮತ್ತು ಗೌರವಗಳೊಂದಿಗೆ ವೇದಿಕೆಗೆ ಆಗಮಿಸಿದರು. ಯದುನಂದನ್ ಪರೇಡ್ ವರದಿ ಸಲ್ಲಿಸಿದರು.
ಕರ್ನಾಟಕ ಸಿಇಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಕ್ಷಯ್ ಹೆಗ್ಡೆ ಅವರಿಗೆ ₹2 ಲಕ್ಷ ನಗದು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಶ್ರೀಪತಿ ಭಟ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಉಪಸ್ಥಿತರಿದ್ದರು.
ಫ್ಲ್ಯಾಗ್ ಏರಿಯಾದಲ್ಲಿ ‘ವಸುದೈವ ಕುಟುಂಬಂ’ ಪರಿಕಲ್ಪನೆಯ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು. ಉಪನ್ಯಾಸಕ ರಾಜೇಶ್ ಡಿ’ಸೋಜಾ ಹಾಗೂ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
.jpg)

