ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್​; ಪೊಲೀಸ್ ಠಾಣೆ ಮೆಟ್ಟಿಲೇರಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ

 





ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ಕೆಟ್ಟ ಕಾಮೆಂಟ್‌, ಪೋಸ್ಟ್‌ ಪ್ರಕಟಿಸುತ್ತಿರುವ ಖಾತೆಗಳ ವಿರುದ್ದ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಬುಧವಾರ ದೂರು ನೀಡಿದ್ದಾರೆ. ಕೆಟ್ಟ ಕಾಮೆಂಟ್ ಹಾಗೂ ಮೆಸೇಜ್​​ಗಳ ಸ್ಕ್ರೀನ್​ಶಾಟ್​​ಗಳ ಸಮೇತ ವಿಜಯಲಕ್ಷ್ಮಿ ಅವರು ದೂರು ನೀಡಿದ್ದು, ಸಿಸಿಬಿಯ ಸೈಬರ್ ಕ್ರೈಂ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.


''ಇತ್ತೀಚಿಗೆ ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ 'ಡೆವಿಲ್' ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾನು ವೇದಿಕೆಯ ಮೇಲೆ ತನ್ನ ಪತಿ ದರ್ಶನ್ ಮತ್ತವರ ನಟನೆ ಬಗ್ಗೆ ಮಾತಾಡಿದ್ದೆ. ಅಲ್ಲದೇ ದರ್ಶನ್ ಅವರು ಹೇಳಿದಂತೆ ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಹಾಗೂ ನಮ್ಮ ಕುಟುಂಬದ ಕುರಿತು ಅಶ್ಲೀಲವಾಗಿ ಕಮೆಂಟ್ ಮಾಡಲಾರಂಭಿಸಿದ್ದಾರೆ. ಇದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಅಂತಹ ಸಾಮಾಜಿಕ ಜಾಲತಾಣ ಖಾತೆಗಳ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು'' ವಿಜಯಲಕ್ಷ್ಮಿ ದರ್ಶನ್​ ಅವರು ದೂರಿನಲ್ಲಿ ತಿಳಿಸಿದ್ದಾರೆ.



ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಸೈಬರ್ ಕ್ರೈಂ ಠಾಣೆಯ ಪೊಲೀಸರು, ತನಿಖೆ ಆರಂಭಿಸಿರುವುದಾಗಿ ತಿಳಿಸಿದ್ದಾರೆ.


ಡೆವಿಲ್ ಸಿನಿಮಾ ಸಕ್ಸಸ್ ಆಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿರುವ ಹಿನ್ನೆಲೆ ಇತ್ತೀಚೆಗೆ ದಾವಣಗೆರೆಗೆ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಡೆವಿಲ್ ಸಿನಿಮಾದ ನಟಿ ರಚನಾ ರೈ ಹಾಗೂ ಹಾಸ್ಯ ನಟ ಹುಲಿ ಕಾರ್ತಿಕ್ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ತೆರಳಿದ್ದರು.

ಈ ವೇಳೆ ವಿಜಯಲಕ್ಷ್ಮಿ ಅವರು ಅಭಿಮಾನಿಗಳನ್ನು ಕುರಿತು ಮಾತನಾಡಿ, "ಕೆಲವರು ದರ್ಶನ್​ ಇಲ್ಲದೆ ಇರುವ ಸಂದರ್ಭದಲ್ಲಿ ಅವರ ಬಗ್ಗೆ ವೇದಿಕೆ ಮೇಲೆ ಹಾಗೂ ಚಾನಲ್​ಗಳಲ್ಲಿ ಕುಳಿತು ಮಾತನಾಡುತ್ತಾರೆ. ಆದರೆ ಅವರು ಬೆಂಗಳೂರಲ್ಲಿ ಇದ್ದಾಗ ವ್ಯಕ್ತಿಗಳು ಅವರ ಇರುವಿಕೆಯನ್ನೇ ತೋರಿಸಲ್ಲ. ದರ್ಶನ್ ಇಲ್ಲದ ವೇಳೆ ಮಾತನಾಡುತ್ತಿದ್ದಾರೆ. ಇಂತ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನೀವು ಉದ್ವೇಗಕ್ಕೆ ಒಳಗಾಗದೇ ಶಾಂತಿಯುತವಾಗಿ ಇರಬೇಕು" ಎಂದು ಕರೆ ಕರೆ ಕೊಟ್ಟಿದ್ದರು.

ಡೆವಿಲ್ ಸಿನಿಮಾ ಸಕ್ಸಸ್ ಆಗಿ ಎಲ್ಲಾ ಚಿತ್ರಮಂದಿರಗಳಲ್ಲಿ ಮುನ್ನುಗ್ಗುತ್ತಿರುವ ಹಿನ್ನೆಲೆ ನೆಚ್ಚಿನ ಹೀರೋ ದರ್ಶನ್ ಅನುಪಸ್ಥಿತಿಯಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಬರುತ್ತಾರೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಗೀತಾಂಜಲಿ ಚಿತ್ರಮಂದಿರದ ಬಳಿ ಕಿಕ್ಕಿರಿದು ಜಮಾಯಿಸಿದ್ದರು.