ಚಿತ್ರದುರ್ಗದಲ್ಲಿ ಭೀಕರ ಅಪಘಾತಕ್ಕೆ ಹೊತ್ತಿ ಉರಿದ ಬಸ್ ; 17 ಕ್ಕೂ ಅಧಿಕ ಮಂದಿ ಸಜೀವ ದಹನ?- 42 ಮಕ್ಕಳು ಸೇಫ್


ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್​​ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹತ್ತಿಕೊಂಡು, 17 ಕ್ಕೂ ಅಧಿಕ  ಮಂದಿಯಷ್ಡು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಸಂಭವಿಸಿದೆ.


ಖಾಸಗಿ ಸ್ಲೀಪರ್ ಕೋಚ್ ಬಸ್​ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ ಹಿರಿಯೂರಿನ ಜವನಗೊಂಡನಹಳ್ಳಿಯ ಗೊರ್ಲತ್ತು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಡಿಕ್ಕಿ ಬಳಿಕ ಕಂಟೇನರ್ ಲಾರಿ ಹಾಗೂ ಬಸ್​ ಎರಡೂ ಬೆಂಕಿ ಹೊತ್ತಿಕೊಂಡಿದ್ದವು. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಅದರಲ್ಲಿದ್ದ 17ಕ್ಕೂ ಅಧಿಕ ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ಲಾರಿ ಚಾಲಕ ಕೂಡ ಸಜೀವ ದಹನವಾಗಿದ್ದಾನೆ. ಬಸ್​ನಲ್ಲಿ ಸುಮಾರು 32 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ.


ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು, "ಇದು ಬೆಳಗಿನ‌ಜಾವ ಎರಡು ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್​​ಗೆ ಎದುರುಗಡೆ ಬಂದಂತಹ  ಲಾರಿ ಅಪ್ಪಳಿಸಿದೆ. ಲಾರಿ ಬಸ್​ನ ಡೀಸೆಲ್‌ ಟ್ಯಾಂಕ್​ಗೆ ಹೊಡೆದಿರಬಹುದು, ಡಿಸೇಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್​​ನ ಒಳಗಿದ್ದ ಕೆಲ ಪ್ರಯಾಣಿಕರು ಹೊರಬಂದಿದ್ದಾರೆ. ಒಳಗೆ ಇದ್ದ ಎಂಟು ಜನ ಹಾಗೂ ಲಾರಿ ಚಾಲಕ ಸೇರಿ ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ'' ಎಂದು ತಿಳಿಸಿದರು.

''12 ಜನ ಗಾಯಳುಗಳು ಹಿರಿಯೂರು ಆಸ್ಪತ್ರೆ, 9 ಜನ ಶಿರಾ ಆಸ್ಪತ್ರೆ ಹಾಗೂ ಮೂವರು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಪ್ರಯಾಣಿಕನಿಗೆ ಹೆಚ್ಚು ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಆಗಿರುವ ಪ್ರಯಾಣಿಕ ಬಿಟ್ಟು ಒಟ್ಟು 24 ಜನ ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್​ನಲ್ಲಿದ್ದ 32 ಜನ ಪೈಕಿ 8 ಜನರ ಜೊತೆಗೆ ಪುಟ್ಟ ಮಗುವಿನ ಶವ ಇದೆ ಎಂದು ತಿಳಿದಿದೆ. ಮೃತರ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಶವಗಳ ಹಸ್ತಾಂತರ ಮಾಡುತ್ತೇವೆ'' ಎಂದು ತಿಳಿಸಿದರು.


ದಾಂಡೇಲಿಗೆ ತೆರಳಿದ್ದ 42 ಜನ ಮಕ್ಕಳಿದ್ದ ಬಸ್ ಸೇಫ್: ಇದೇ ಸಂದರ್ಭದಲ್ಲಿ, ಅಪಘಾತವಾಗಿ ಸುಟ್ಟು ಕರಕಲಾಗಿರುವ ಬಸ್ ಸರಿಸಮವಾಗಿ ಚಲಿಸುತ್ತಿದ್ದ ಶಾಲಾ ಮಕ್ಕಳು ಬಸ್ ದಾಂಡೇಲಿಗೆ ತೆರಳುತ್ತಿತ್ತು. ಅಪಘಾತವಾದ ಬಸ್​​ ಮಕ್ಕಳ ಬಸ್ಸಿಗೆ ಟಚ್ ಆಗಿದೆ. ಮಕ್ಕಳಿದ್ದ ಬಸ್ ರಾಷ್ಡ್ರೀಯ ಹೆದ್ದಾರಿ ದಾಟಿ ಚರಡಿ ದಾಟಿ ಆ ಭಾಗಕ್ಕೆ ಹೋಗಿ ನಿಂತಿದೆ. ಅ ಬಸ್ಸಿನಲ್ಲಿದ್ದ 42 ಜನ ಮಕ್ಕಳು ಸುರಕ್ಷಿತವಾಗಿದ್ದಾರೆ. ಮಕ್ಕಳಿದ್ದ ಬಸ್ಸಿನ ಚಾಲಕ ಇಡೀ ಘಟನೆಯ ಪ್ರತ್ಯಕ್ಷದರ್ಶಿ ಅವರಿಂದ ಹೇಳಿಕೆ ಪಡೆದಿದ್ದೇವೆ" ಎಂದು ಐಜಿಪಿ ರವಿಕಾಂತೇಗೌಡ ಹೇಳಿದರು.