ಲಖನೌ: ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಬಗ್ಗೆ ಜನಸಾಮಾನ್ಯರಿಗೆ ಅಪಾರ ಗೌರವ, ನಿರೀಕ್ಷೆ ಇದೆ. ಪೊಲೀಸ್ ವ್ಯವಸ್ಥೆ ತಮಗೆ ಆಗುವ ತೊಂದರೆಯನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯನ್ನು ಇರಿಸಿಕೊಂಡಿರುತ್ತಾರೆ. ಆದ್ದರಿಂದಲೇ ಯಾವುದೇ ಅಪಾಯ ಅಥವಾ ಅನ್ಯಾಯದ ಸಂದರ್ಭಗಳಲ್ಲಿ ಜನರ ಮನಸ್ಸಿಗೆ ಮೊದಲು ನೆನಪಿಗೆ ಬರುವವರೆಂದರೆ ಅವರು ಪೊಲೀಸರು. ಆದರೆ ಕೆಲವೊಬ್ಬ ಪೊಲೀಸರು ತಮ್ಮ ದುರ್ನಡತೆಯಿಂದ ಕೆಲವೊಮ್ಮೆ ಸುದ್ದಿಯಾಗುತ್ತಾರೆ. ಸರ್ಕಾರದಿಂದ ಕೈತುಂಬಾ ಸಂಬಳ ಸಿಕ್ಕರೂ ಎಂಜಲು ಕಾಸಿಗೆ ಆಸೆ ಬಿದ್ದು, ಲಂಚ ತೆಗೆದುಕೊಳ್ಳುವ ಪೊಲೀಸ್ ಅಧಿಕಾರಿಗಳಿದ್ದಾರೆ. ಜನರಿಗೆ ಏನೇ ಕೆಲಸ ಮಾಡಿಕೊಡಬೇಕಾದರೂ ಲಂಚವಿಲ್ಲದೇ ಆ ಕೆಲಸವನ್ನು ಮಾಡುವುದೇ ಇಲ್ಲ. ಈ ರೀತಿ ಲಂಚ ಪಡೆಯುವಾಗ ನೇರವಾಗಿ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳಿವೆ. ಆ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬರೋಬ್ಬರಿ 2 ಲಕ್ಷ ರೂ. ಲಂಚ ಪಡೆಯುತ್ತಿರುವಾಗಲೇ ಭಯೋತ್ಪಾದನ ನಿಗ್ರಹ ದಳ (ಎಸಿಬಿ)ದ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಆರೋಪಿಯ ಹೆಸರನ್ನು ಕೈಬಿಡಲು 2ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, ತಾನು ಮಾಡದ ಅಪರಾಧಕ್ಕೆ ಹಣ ಪಾವತಿಸಲು ಇಷ್ಟಪಡದ ಸಂತ್ರಸ್ತ ಯುವಕ ಎಸಿಬಿಯನ್ನು ಸಂಪರ್ಕಿಸಿದರು. ಬಳಿಕ ಇನ್ಸ್‌ಪೆಕ್ಟರ್‌ಗೆ ಖೆಡ್ಡಾ ತೋಡಲಾಯಿತು. ಅದರಂತೆ 2 ಲಕ್ಷ ರೂ. ಲಂಚ ತೆಗೆದುಕೊಳ್ಳುತ್ತಿದ್ದಾಗ ಇನ್‌ಸ್ಪೆಕ್ಟರ್ ಸಿಕ್ಕಿಬಿದ್ದಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಭ್ರಷ್ಟಾಚಾರ ನಿಗ್ರಹ ತಂಡವು 2ಲಕ್ಷ ಲಂಚ ಪಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್ ಧನಂಜಯ್ ಸಿಂಗ್ ಎಂಬುವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಧನಂಜಯ್ ನಿಶಾತ್‌ಗಂಜ್ ಹೊರಠಾಣೆಯ ಉಸ್ತುವಾರಿ ಅಧಿಕಾರಿ. ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಹೆಸರು ತೆಗೆಯಬೇಕಾದರೆ ಕೊಡಬೇಕೆಂದು ಕೋಚಿಂಗ್ ಸೆಂಟರ್ ಮಾಲೀಕ ಪ್ರತೀಕ್ ಗುಪ್ತಾರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತ ಪ್ರತೀಕ್ ಎಸಿಬಿಗೆ ದೂರು ಸಲ್ಲಿಸಿದ್ದರು. ಬಳಿಕ ಎಸಿಬಿ ಅಧಿಕಾರಿಗಳು ಧನಂಜಯ್‌ಗೆ ಖೆಡ್ಡಾ ತೋಡಿ ಬಲೆ ಬೀಳಿಸಿದ್ದಾರೆ.
ಎರಡು ತಿಂಗಳ ಹಿಂದೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು ಎಂದು ಸಂತ್ರಸ್ತ ಪ್ರತೀಕ್ ಗುಪ್ತಾ ಹೇಳಿದ್ದಾರೆ. ತನ್ನ ಕೋಚಿಂಗ್ ಸೆಂಟರ್‌ನಲ್ಲಿ ಕೆಲಸ ತೊರೆದಿದ್ದ ಮಾಜಿ ಉದ್ಯೋಗಿಯೊಬ್ಬಾಕೆ ನಾಲ್ಕು ತಿಂಗಳ ಬಳಿಕ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಿದಳು. ಪ್ರಕರಣ ಹಿಂತೆಗೆದುಕೊಳ್ಳಬೇಕಾದರೆ 50 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಳು. ನಾನು 10 ಲಕ್ಷ ರೂ. ನೀಡುವುದಾಗಿ ಹೇಳಿದೆ. ಆದರೆ, ಆಕೆ ಒಪ್ಪಲಿಲ್ಲ. ಪೂರ್ತಿ ಹಣ ನೀಡಿದರೆ ಮಾತ್ರ ನಾನು ಪ್ರಕರಣ ವಾಪಸ್ಸು ಪಡೆಯುತ್ತೇನೆಂದು ಹೇಳಿದಳು.
ಇತ್ತ ಪ್ರಕರಣ ದಾಖಲಿಸಿದ ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನನ್ನಿಂದ ಹಣ ವಸೂಲಿ ಮಾಡಲು ಮುಂದಾದರು. ಪ್ರಕರಣದಿಂದ ಹೆಸರು ಕೈಬಿಡಬೇಕಾದರೆ 2 ಲಕ್ಷ ರೂಪಾಯಿ ಲಂಚ ಕೊಡಬೇಕೆಂದು ಇನ್ಸ್‌ಪೆಕ್ಟರ್ ಧನಂಜಯ್ ಸಿಂಗ್ ಒತ್ತಾಯಿಸಿದರು. ಅದರಿಂದ ಬೇಸತ್ತು ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿದೆ ಎಂದು ಪ್ರತೀಕ್ ಹೇಳಿಕೊಂಡಿದ್ದಾರೆ.
 
 
 
 
 
 
 
 
 
 
 
 
 
 
 
 
 
 
