ಪ್ರಕೃತಿಯೊಂದಿಗೆ ಬದುಕುವುದು ಸಂಸ್ಕೃತಿ, ಪ್ರಕೃತಿಗೆ ವಿರುದ್ಧವಾಗಿ ಬದುಕುವುದು ವಿಕೃತಿ: ಕಾರ್ಣಿಕ್



ಆಳ್ವಾಸ್ ಆಯೋಜಿಸಿದ್ದ ಟೆಡ್‌ಎಕ್ಸ್ ಟಾಕ್


ಮೂಡುಬಿದಿರೆ: 
ಚೊಚ್ಚಲ ಬಾರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ ಜ್ಞಾನ, ಅನುಭವ ಹಾಗೂ ನವೀನ ಆಲೋಚನೆಗಳ ಹಂಚಿಕೆಗೆAದಿರುವ ಅಂತರರಾಷ್ಟ್ರೀಯ ಖ್ಯಾತಿಯ ವೇದಿಕೆ ‘ಟೆಡ್‌ಎಕ್ಸ್ ಎಐಇಟಿ’ ಕಾರ್ಯಕ್ರಮವನ್ನು ಶನಿವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣವೆಂಬುದು ಕೇವಲ ಪದವಿ ಅಥವಾ ಉದ್ಯೋಗಕ್ಕೆ ಸೀಮಿತವಾಗಬಾರದು. ಅದು ವಿದ್ಯಾರ್ಥಿಯೊಳಗಿನ ಅಸಾಧಾರಣ ಸಾಮರ್ಥ್ಯವನ್ನು ಪೋಷಿಸಿ, ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿ ಕೆಲಸಮಾಡಬೇಕು. ಆಳ್ವಾಸ್ ಸಂಸ್ಥೆ ಇಂತಹ ಅವಕಾಶಗಳ ಮಹಾಪೂರವನ್ನು ತನ್ನ ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಪ್ರತಿಯೊಬ್ಬರಲ್ಲೂ ಅಡಗಿರುವ ಶಕ್ತಿ ಮತ್ತು ಪ್ರತಿಭೆಯನ್ನು ಹೊರತೆಗೆಯುವುದು ನಿಜವಾದ ಶಿಕ್ಷಣದ ಧ್ಯೇಯವಾಗಬೇಕು ಎಂದರು.

ಇಂದಿನ ದಿನಮಾನಸದಲ್ಲಿ ನಾವು ಶಿಕ್ಷಣದ ನಿಜವಾದ ಗುರಿಯಿಂದ ನಿಧಾನವಾಗಿ ವಿಮುಖರಾಗುತ್ತಿರುವ ಬೆಳವಣಿಗೆಗಳು ನಡೆಯುತ್ತಿದೆ.  ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಮೌಲ್ಯಗಳು ಹಾಗೂ ಮಾನವೀಯತೆ ಅತಿ ಮುಖ್ಯ. ಶಿಕ್ಷಣವು ಈ ಎರಡನ್ನೂ ಸಮತೋಲನದಿಂದ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.  

ಭೂಮಿಯ ಮೇಲಿರುವ ಜೀವಿಗಳಲ್ಲಿ ಕೇವಲ 1% ದಷ್ಟಿರುವ ಮಾನವರು,  ಜಾಗತಿಕ ತಾಪಮಾನ ಏರಿಕೆಗೆ 99.99% ಕಾರಣಿಕರ್ತರೆಂದರೆ, ಮನುಷ್ಯನ ಬೇಜಾವಬ್ದಾರಿ ಮತ್ತು ಅಸಮರ್ಪಕ ಜೀವನ ಶೈಲಿಯ ಪರಿಣಾಮವನ್ನು ಗ್ರಹಿಸಿಕೊಳ್ಳಬಹುದು.  ಪ್ರಕೃತಿಯೊಂದಿಗೆ ಬದುಕುವುದು ಸಂಸ್ಕೃತಿ, ಪ್ರಕೃತಿಗೆ ವಿರುದ್ಧವಾಗಿ ಬದುಕುವುದು ವಿಕೃತಿ. ಇದನ್ನು ಮರೆಯಬಾರದು” ಎಂದು ಎಂದರು. ನಿಮ್ಮೊಳಗೆ ದಿವ್ಯತೆ ನೆಲೆಸಿದರೆ ಅದು ಸದಾ ಒಳ್ಳೆಯದನ್ನು ಮಾಡಲು ಪ್ರೇರೇಪಿಸುತ್ತದೆ. ಗುರಿ ಶುದ್ಧವಾಗಿರಬೇಕಾದರೆ ಮನಸ್ಸಿನಲ್ಲಿ ಕಲ್ಮಶವಿಲ್ಲದ ನಿಷ್ಕಾಮ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ನಿಸ್ವಾರ್ಥತೆ ಮತ್ತು ಶ್ರೇಷ್ಠತೆಯ ಹಾದಿಯಲ್ಲಿ ಸಾಗಿದಾಗಲೇ ಸಮಾಜಕ್ಕೂ, ರಾಷ್ಟ್ರಕ್ಕೂ, ಪ್ರಕೃತಿಗೂ ನಾವೊಂದು ದೊಡ್ಡ ಕೊಡುಗೆಯನ್ನು ನೀಡಬಲ್ಲೆವು ಎಂದು  ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಏಳು ಗಣ್ಯ ವ್ಯಕ್ತಿಗಳು  ತಮ್ಮ ಅನುಭವಗಳನ್ನು ಹಂಚಿಕೊAಡರು. 10 ವರ್ಷದ ಬಾಲಕಿ, ರಾಷ್ಟ್ರೀಯ ಮಟ್ಟದ ಸ್ಕೇಟ್‌ಬೋರ್ಡ್ ಚಾಂಪಿಯನ್ ಜಾನಕಿ ಆನಂದ, ಲೈಫ್‌ಸ್ಟೈಲ್ ವೈದ್ಯ ಡಾ. ಅಚ್ಯುತನ್ ಈಶ್ವರ್, ನಿವ್ಯಿಯಸ್ ಸೊಲ್ಯೂಷನ್‌ನ ಸಿಇಒ ಮತ್ತು ಸಹ-ಸ್ಥಾಪಕ ಸುಯೋಗ್ ಶೆಟ್ಟಿ, ನಿವೃತ್ತ ಸೇನಾ ಅಧಿಕಾರಿ ಲೆ. ಜನರಲ್ ಎ. ಅರುಣ್,  ಸೈ-ಫೈ ಕ್ಷೇತ್ರದ  ಸುಫಿಯಾನ್ ಆಲಂ, ಕಲಾವಿದ ಹಾಗೂ ಕಂಟೆAಟ್ ಕ್ರಿಯೇಟರ್ ಅಭಿಷೇಕ್ ಮಿಶ್ರಾ ಮತ್ತು  ಖ್ಯಾತ ಭಾಗವತರು ಹಾಗೂ ಯಕ್ಷಗಾನ ಕಲಾವಿದ ಪಟ್ಲ ಸತೀಶ ಶೆಟ್ಟಿಯವರು ತಮ್ಮ ಜೀವನದ ಪ್ರೇರಣಾದಾಯಕ ಕಥನಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು.

ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಪ್ರಾಚರ‍್ಯರಾದ ಡಾ ಕುರಿಯನ್, ಡಾ ಪೀಟರ್ ಫೆರ್ನಾಂಡೀಸ್,  ಶಿಕ್ಷಣ ತಜ್ಞೆ ರೂಪಾ ಅರುಣ್ ಇದ್ದರು.  ಶಾರ್ವರಿ ಶೆಟ್ಟಿ  ನಿರೂಪಿಸಿ, ಅನ್ಸಿನ್ ಕುಮಾರ್ ವಂದಿಸಿದರು.