ಮಣಿಪಾಲ: ಹೆತ್ತತಾಯಿಯನ್ನೇ ಕತ್ತು ಹಿಸುಕಿ ಕೊಲೆಗೈದ ಪುತ್ರ ಅರೆಸ್ಟ್


ಮಣಿಪಾಲ: ಪುತ್ರನೋರ್ವನು ಹಣಕ್ಕಾಗಿ ಹೆತ್ತತಾಯಿಯನ್ನೇ  ಕತ್ತು ಹಿಸುಕಿ ಕೊಲೆಗೈದ ಪ್ರಕರಣ ಮರಣೋತ್ತರ ಪರೀಕ್ಷೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುತ್ರನನ್ನು ಮಣಿಪಾಲ ಪೊಲೀಸರು ಪೊಲೀಸರು ಬಂಧಿಸಿದ್ದಾರೆ. 

ಪದ್ಮಾಬಾಯಿ(45) ಕೊಲೆಯಾದ ತಾಯಿ. ಈಶ ನಾಯಕ್(26) ಕೊಲೆ ಆರೋಪಿ. 

ಜೂ.18ರಂದು ರಾತ್ರಿ ಪದ್ಮಾಬಾಯಿ ಸೊಂಟ ನೋವಿನಿಂದ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆ ರಾತ್ರಿ ಪದ್ಮಾಬಾಯಿಯವರ ತಂಗಿ ಶಿಲ್ಪಾರಿಗೆ ಕರೆ ಮಾಡಿದ ಈಶ ನಾಯಕ್‌, ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯಲು  ಹಣ ಕಳುಹಿಸುವಂತೆ ತಿಳಿಸಿದ್ದನು. ಅದರಂತೆ ಶಿಲ್ಪಾ ಆನ್‌ಲೈನ್ ಮೂಲಕ ಹಣ ಕಳುಹಿಸಿದ್ದರು.

ಜೂ.19ರಂದು ಬೆಳಗ್ಗೆ ಶಿಲ್ಪಾರಿಗೆ ಕರೆ ಮಾಡಿದ ಈಶ ನಾಯಕ್, ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮೃತಪಟ್ಟಿರುವುದಾಗಿ ತಿಳಿಸಿದ್ದನು. ಅದರಂತೆ ಶಿಲ್ಪಾ ಆಸ್ಪತ್ರೆಗೆ ಬಂದು ನೋಡಿದಾಗ ಪದ್ಮಬಾಯಿಯವರ ಕತ್ತು ಕೆಂಪಾಗಿದ್ದು, ಒತ್ತಿದ ರೀತಿ ಕಂಡುಬಂದಿದೆ. ಆದ್ದರಿಂದ ಈ ಮರಣದಲ್ಲಿ ಸಂಶಯ ಇರುವುದಾಗಿ ಶಿಲ್ಪಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶವಾಗಾರದಲ್ಲಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳು ವೈದ್ಯಕೀಯ ಶವ ಮರಣೋತ್ತರ ಪರೀಕ್ಷೆ ನಡೆಸಿದರು.

ಜೂ.21ರಂದು ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿ ಮೃತ ಪದ್ಮಾಬಾಯಿ ಅವರ ಮರಣದ ಬಗ್ಗೆ ಪ್ರಾಥಮಿಕ ವರದಿ ನೀಡಿದ್ದಾರೆ. ಅದರಲ್ಲಿ ಪದ್ಮಾಬಾಯಿ ಅವರನ್ನು ಯಾರೋ ದುಷ್ಕರ್ಮಿಗಳು ಜೂ.18ರಂದು ರಾತ್ರಿಯಿಂದ ಜೂ.19ರ ಬೆಳಗಿನ ನಡುವೆ ಕೊಲೆ ಮಾಡಿರುವುದಾಗಿ ದೃಢಪಟ್ಟಿದೆ. ಮಣಿಪಾಲ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.

ನಂತರದ ತನಿಖೆಯಲ್ಲಿ ಪದ್ಮಾಬಾಯಿ ಅವರನ್ನು ಅವರ ಪುತ್ರ ಈಶ ನಾಯ್ಕ್ ಹಣಕ್ಕಾಗಿ ಹಾಗೂ ಕೌಟುಂಬಿಕ ಕಲಸದಿಂದ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಆರೋಪಿ ಈಶ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.