ಮಂಗಳೂರು: ಸಹೋದರನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕನೂ ಅಪಘಾತಕ್ಕೆ ಬಲಿ


ಮಂಗಳೂರು: ತಮ್ಮನ ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ಅಕ್ಕ ನಗರದ ಹೊರವಲಯದ ಪಾವಂಜೆ ಬಳಿ ನಡೆದ ಅಪಘಾತದಿಂದ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ದಾರುಣ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ನಗರದ ಬಂಗ್ರಕೂಳೂರು ನಿವಾಸಿ ಶ್ರುತಿ(27) ಮೃತಪಟ್ಟವರು.

ಕಂಪ್ಯೂಟರ್ ಇಂಜಿನಿಯರಿಂಗ್ ಪೂರೈಸಿರುವ ಶ್ರುತಿ ಚೆನ್ನೈನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಮೆಕ್ಯಾನಿಕ್ ಆಗಿದ್ದ ತನ್ನ ಸಹೋದರ ಸುಜಿತ್ ಜೂನ್ 10ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಅವರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಕೆಲಸಕ್ಕೆ ರಜೆ ಹಾಕಿ ಮನೆಗೆ ಬಂದಿದ್ದರು. 

ಈ ನಡುವೆ ಬ್ಯಾಂಕ್ ಕೆಲಸಕ್ಕೆಂದು ತಂದೆಯೊಂದಿಗೆ ಕಿನ್ನಿಗೋಳಿ ಕಡೆಗೆ ಹೋಗಿ ಮತ್ತೆ ಮನೆಯತ್ತ ಹಿಂದೆ ಬರುತ್ತಿದ್ದರು. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಾವಂಜೆ ಬಳಿ‌ ಸ್ಕೂಟರ್ ನಿಲ್ಲಿಸಿ ರೈನ್ ಕೋಟ್ ಹಾಕುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರನ್ನು ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದ ಕಾರಣ ಈ ಅಪಘಾತ ಸಂಭವಿಸಿದೆ. ಕಾರು ಅಲ್ಲಿ ನಿಂತಿದ್ದ ಬೈಕ್ ಹಾಗೂ ಸ್ಕೂಟರ್‌ಗೆ ಢಿಕ್ಕಿಪಡಿಸಿದ್ದಲ್ಲದೆ, ಸ್ಕೂಟರ್‌ನಲ್ಲಿದ್ದ ಶ್ರುತಿಯವರ ಸಹಿತ ಎಳೆದೊಯ್ದು ಹೆದ್ದಾರಿ ಬದಿಯಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿದೆ. 

ಪರಿಣಾಮ ಶ್ರುತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಅವರ ತಂದೆ ಗೋಪಾಲ ಆಚಾರ್ಯ(57)ರವರೂ ಅಪಘಾತದಲ್ಲಿ ಗಾಯಗೊಂಡಿದ್ದು, ಅವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಮತ್ತೋರ್ವ ಮಹಿಳೆಯೂ ಗಾಯಗೊಂಡಿದ್ದಾರೆ.

ಗೋಪಾಲ ಆಚಾರ್ಯರಿಗೆ ಇಬ್ಬರೇ ಮಕ್ಕಳಿದ್ದು, ಪುತ್ರ 15ದಿನಗಳ ಹಿಂದಷ್ಟೇ ಮೃತಪಟ್ಟಿದ್ದ. ಆ ನೋವು ಮಾಸುವ ಮುನ್ನವೇ ಪುತ್ರಿಯೂ ಅಪಘಾತದಿಂದ ಮೃತಪಟ್ಟಿರುವುದು ಕುಟುಂಬವನ್ನು ಶೋಕದ ಮಡುವಿಗೆ ತಳ್ಳಿದೆ.