ಆಹಾರಕ್ಕಾಗಿ ಬೆನ್ನಟ್ಟಿದ್ದ ಹುಲಿರಾಯ ನಾಯಿಯೊಂದಿಗೆ 9ಅಡಿ ಆಳದ ಗುಂಡಿಗೆ- ಮೇಲೆ ಬರಲಾಗದೆ ಪರದಾಟ


ಇಡುಕ್ಕಿ: ಕೇರಳ-ತಮಿಳುನಾಡು ಗಡಿ ಸಮೀಪದ  ಮೈಲಾಡುಂಪರೈ ಬಳಿ 9ಅಡಿ ಆಳದ ಗುಂಡಿಯಲ್ಲಿ  ಹುಲಿ ಮತ್ತು ನಾಯಿ ಒಟ್ಟಿಗೆ ಸಿಲುಕಿಕೊಂಡಿತ್ತು. ಸದ್ಯ ಎರಡೂ ಪ್ರಾಣಿಗಳನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ರವಿವಾರ ಬೆಳಗ್ಗೆ 7ಗಂಟೆಯ ಸುಮಾರಿಗೆ ಹುಲಿ ನಾಯಿಯನ್ನು ಆಹಾರಕ್ಕಾಗಿ ಬೆನ್ನಟ್ಟಿದೆ‌. ಈ ವೇಳೆ ಎರಡೂ ಪ್ರಾಣಿಗಳು ಗುಂಡಿಗೆ ಬಿದ್ದಿವೆ. ಗುಂಡಿಗೆ ಬಿದ್ದು ಮೇಲೆ ಬರಲಾಗದೆ ಹುಲಿ ಆಕ್ರೋಶಗೊಂಡು ಬೊಬ್ಬೆ ಇಡುತ್ತಿತ್ತು‌. ಆದ್ದರಿಂದ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಶಾಂತಗೊಳಿಸಿತ್ತು. ನಾಯಿಯೂ ಬೆದರಿ ಬೊಗಳುತ್ತಿದ್ದ ಕಾರಣ ಅದಕ್ಕೂ ಅರವಳಿಕೆ ಚುಚ್ಚುಮದ್ದನ್ನು ನೀಡಲಾಗಿದೆ.

ಮಧ್ಯಾಹ್ನದ ವೇಳೆ ಹುಲಿ ಪ್ರಶಾಂತವಾಗಿತ್ತು. ಬಲೆಯ ಮೂಲಕ ಎರಡೂ ಪ್ರಾಣಿಯನ್ನು ಮೇಲಕ್ಕೆತ್ತಲಾಗಿದೆ. ಗುಂಡಿಗೆ ಬಿದ್ದಿದ್ದರಿಂದ ಎರಡೂ ಪ್ರಾಣಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಸದ್ಯ ಹುಲಿಯನ್ನು ಪೆರಿಯಾರ್ ಪ್ರಾಣಿಧಾಮದಲ್ಲಿ ಬಿಡುಗಡೆ ಮಾಡಲಾಗಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.