ಮಂಗಳೂರು: ಕೋರ್ಟ್ ಆವರಣದಲ್ಲೇ ರೀಲ್ಸ್ ಮಾಡಿ ದೌಲತ್ತು ಮೆರೆದ ರೌಡಿಗೆ ಎಫ್ಐಆರ್ ಬಿಸಿ!
Tuesday, May 27, 2025
ಮಂಗಳೂರು: ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ರೌಡಿಯೋರ್ವನು ರೀಲ್ಸ್ ಮಾಡಿ ರೌಡಿ ದರ್ಬಾರ್ ನಡೆಸಿರುವ ಬೆನ್ನಲ್ಲೇ ಆತನ ಮೇಲೆ ಪ್ರಕರಣ ದಾಖಲಾಗಿದೆ
ಇಮ್ರಾನ್ ಅಲಿಯಾಸ್ ಸುರಮೊ ಇಮ್ರಾನ್ ರೌಡಿ ದರ್ಬಾರ್ ನಡೆಸಿದವನು.
ಈತ ಪೊಲೀಸ್ ಸಿಬ್ಬಂದಿ ಜೊತೆಗೆ ಇರುವಾಗಲೇ ನ್ಯಾಯಾಲಯದ ಆವರಣದಲ್ಲಿ ತನ್ನ ರೌಡಿ ಪ್ರವೃತ್ತಿ ಪ್ರದರ್ಶನ ಮಾಡಿ ತುಟಿಗೆ ಸಿಗರೇಟ್ ಇಟ್ಟು ಸ್ಟೈಲ್ ಆಗಿ ಧೂಮಪಾನ ಮಾಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನ 'ಟೀಮ್ ಟಾರ್ಗೆಟ್' ಎಂಬ ಪೇಜ್‌ನ ಇಮ್ಮು ಬಾಯ್ ಎಂಬ ಅಕೌಂಟ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಇಮ್ರಾನ್ ನ್ಯಾಯಾಲಯಕ್ಕೆ ಶರಣಾಗುವ ಮೊದಲು ಹಾಗೂ ಶರಣಾದ ಬಳಿಕದ ವಿಡಿಯೋ ಎನ್ನಲಾಗಿದೆ.
ಬರ್ಕೆ ಠಾಣಾ ಪೊಲೀಸ್ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದು ವಾಪಸ್ ಕರೆ ತರುತ್ತಿರುವಾಗ ನ್ಯಾಯಾಲಯದ ಆವರಣದಲ್ಲಿ ಈತ ತನ್ನ ರೌಡಿ ಪ್ರವೃತ್ತಿ ಮೆರೆದಿದ್ದಾನೆ. ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಪೊಲೀಸ್ ಸಿಬ್ಬಂದಿಯೊಂದಿಗೆ ಇರುವಾಗಲೇ ಸ್ಟೈಲ್ ಆಗಿ ಧೂಮಪಾನ ಮಾಡಿದ್ದಾನೆ.
ಹಿಂದಿ ಹಾಡನ್ನು ಸೇರಿಸಿ, ನಟ ಯಶ್ ಡೈಲಾಗ್ ಅನ್ನು ಬ್ಯಾಗ್ ರೌಂಡ್ ವಾಯ್ಸ್ ಆಗಿ ಇಟ್ಟುಕೊಂಡು ಈ ವೀಡಿಯೋ ಮಾಡಲಾಗಿದೆ. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮತ್ತು ನ್ಯಾಯಾಲಯವನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಕ್ಕೆ ಈತನ ಮೇಲೆ ಎಫ್ಐಅರ್ ದಾಖಲಿಸಲಾಗಿದೆ.