ಬೆಳಗಾವಿ: ಅಪ್ರಾಪ್ತೆಯನ್ನು ಅತ್ಯಾಚಾರಗೈದ ಸ್ವಾಮೀಜಿ ಅಂದರ್
Saturday, May 24, 2025
ಬೆಳಗಾವಿ: ಅಪ್ರಾಪ್ತೆಯನ್ನು ಅತ್ಯಾಚಾರಗೈದ ಆರೋಪದಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ಲೋಕೇಶ್ವರ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಲೋಕೇಶ್ವರ ಸ್ವಾಮೀಜಿಯ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಸ್ವಾಮೀಜಿಯನ್ನು ಬಂಧಿಸಿದ್ದಾರೆ.
ಮೇ 13ರಂದು ಮನೆಗೆ ಹೊರಟಿದ್ದ ಬಾಲಕಿಯನ್ನು ಸ್ವಾಮೀಜಿ ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಬಾಲಕಿಯ ಕುಟುಂಬಕ್ಕೆ ಪರಿಚಿತನಾಗಿದ್ದ ಸ್ವಾಮೀಜಿ ಆಗಿದ್ದರಿಂದ ಆಕೆ ಕಾರು ಹತ್ತಿದ್ದಳು. ಮನೆ ಹತ್ತಿರ ಬಂದರೂ ಕಾರನ್ನು ನಿಲ್ಲಿಸದೇ ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಮೂಲಕ ರಾಯಚೂರಿಗೆ ಬಾಲಕಿಯನ್ನು ಸ್ವಾಮೀಜಿ ಕರೆದೊಯ್ದಿದ್ದಾನೆ. ರಾಯಚೂರಿನ ಲಾಡ್ಜ್ ಒಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿ ಬಂದಿದೆ.
ಮೇ 16ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಸ್ವಾಮೀಜಿ ಬಿಟ್ಟು ಹೋಗಿದ್ದಾನೆ. ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ಥೆ ಆರೋಪಿಸಿದ್ದಾರೆ.
ಘಟನೆಯಿಂದ ನೊಂದು ಬಾಲಕಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ತಕ್ಷಣ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ಘಟನೆ ಮಾಹಿತಿ ಬೆನ್ನಟ್ಟಿದ ಪೊಲೀಸರು, ಸ್ವಾಮೀಜಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.