ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಳಸಿ ಪತಿಯನ್ನು ಸುಟ್ಟು ಚಟ್ಟಕ್ಕೇರಿಸಿದ ಪ್ರಾಂಶುಪಾಲೆ ಪತ್ನಿ
Friday, May 23, 2025
ಮುಂಬೈ: ಅಪ್ರಾಪ್ತ ವಿದ್ಯಾರ್ಥಿಗಳನ್ನೇ ಬಳಸಿ ಪ್ರಾಂಶುಪಾಲೆಯೊಬ್ಬಳು ಪತಿಗೆ ಊಟದಲ್ಲಿ ವಿಷ ಹಾಕಿ ಹತ್ಯೆಗೈದು ಮೃತದೇಹವನ್ನು ಸುಟ್ಟುಹಾಕಿರುವ ಭೀಕರ ಕೃತ್ಯ ಮುಂಬೈನಲ್ಲಿ ನಡೆದಿದೆ.
ನಾಗುರದ ಶಾಂತನು ದೇಶಮುಖ್ (32) ಎಂದು ಮೃತಪಟ್ಟ ವ್ಯಕ್ತಿ. ಸನ್‌ರೈಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ನಿಧಿ ದೇಶಮುಖ್ (24) ಈ ಪತಿಯಮ್ನೇ ಕೊಲೆಗೈದ ಮಹಿಳೆ.
ತಾನು ಪ್ರಾಂಶುಪಾಲೆಯಾಗಿದ್ದ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳ ಸಹಾಯ ಪಡೆದ ಈಕೆ, ಹತ್ಯೆಗೈದ ಬಳಿಕ ಪತಿಯ ಮೃತದೇಹವನ್ನು ಪೆಟ್ರೋಲ್ ಸುರಿದು ಸುಟ್ಟಿದ್ದಾಳೆ. ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿದ್ದು, ಮಹಿಳೆಯನ್ನು ಇದೀಗ ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ನಿಧಿ ದೇಶ್‌ಮುಖ್ ಒಪ್ಪಿಕೊಂಡಿದ್ದಾಳೆ. ಪ್ರಾಂಶುಪಾಲೆ ಜೊತೆ ಕೈಜೋಡಿಸಿದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಸದ್ಯ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಮೇ.15ರಂದು, ಚೌಸಲಾ ಅರಣ್ಯಪ್ರದೇಶದಲ್ಲಿ ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸುಟ್ಟ ಮೃತ ದೇಹವೊಂದು ಪತ್ತೆಯಾಗಿತ್ತು. ವಿಧಿವಿಜ್ಞಾನ ತಂಡ ನಡೆಸಿದ ಪರೀಕ್ಷೆಯ ಬಳಿಕ ಪೊಲೀಸರಿಗೆ ಮೃತ ವ್ಯಕ್ತಿ ಶಾಂತನು ಎಂಬುದು ಸ್ಪಷ್ಟವಾಯಿತು. ಸ್ಥಳೀಯರ ಸಹಾಯದಿಂದ ಸುದೀರ್ಘ ತನಿಖೆ ನಡೆಸಿದ ಖಾಕಿಗೆ ಮೃತನ ಪತ್ನಿಯೇ ಇಷ್ಟೆಲ್ಲ ಘಟನೆಗೆ ಕಾರಣ ಎಂಬುದು ತಿಳಿಯಿತು. ಪ್ರಸ್ತುತ ಆರೋಪಿ ನಿಧಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅತಿಯಾದ ಕುಡಿತಕ್ಕೆ ದಾಸನಾಗಿದ್ದ ಪತಿ ನಡವಳಿಕೆಯಿಂದ ಬೇಸತ್ತಿದ್ದ ನಿಧಿ, ಮೇ 13ರಂದು ವಿಷ ಉಣಿಸಿ ರಾತ್ರಿ ಕೊಲೆ ಮಾಡಿದ್ದಾಳೆ. ಬಳಿಕ ಮೃತದೇಹವನ್ನು ಸುಟ್ಟುಹಾಕಲು ಸಂಚು ರೂಪಿಸಿದ ಆಕೆ, ತನ್ನ ಮನೆಗೆ ಟ್ಯೂಷನ್ ಹೇಳಿಸಿಕೊಳ್ಳಲು ಬರುತ್ತಿದ್ದ ಶಾಲಾ ವಿದ್ಯಾರ್ಥಿಗಳ ಸಹಾಯವನ್ನು ಕೋರಿದ್ದಾಳೆ. ಮರುದಿನ ಬೆಳಗ್ಗೆ, ನಾಲ್ವರೂ ಸೇರಿ ಯಾರೂ ಸಂಚರಿಸದ ನಿರ್ಜನ ಪ್ರದೇಶದಲ್ಲಿ ಮೃತ ದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ.