ಗೆಳತಿಯೊಂದಿಗೆ ಅಕ್ರಮ ಸಂಬಂಧದ ಅನುಮಾನ: ಗಾಢ ನಿದ್ದೆಯಲ್ಲಿದ್ದವನ ಜೀವಂತ ಸುಟ್ಟು ಹಾಕಿದ ಆರೋಪಿ ಅಂದರ್
Wednesday, May 21, 2025
ಬೆಂಗಳೂರು: ತನ್ನ ಗೆಳತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನಗೊಂಡು ಯುವಕನೊಬ್ಬ ಮಲಗಿದ್ದವನ ಮೇಲೆ ಪೆಟ್ರೋಲ್ ಸುರಿದು ಸಜೀವವಾಗಿ ದಹಿಸಿರುವ ಘಟನೆಯೊಂದು ಕಡುಬೀಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿ ಶುಕ್ರವಾರ ನಡೆದಿದೆ.
ಇಜುಲ್ ಹಕ್ (25) ಮೃತಪಟ್ಟ ವ್ಯಕ್ತಿ. ಪ್ರಕರಣ ಸಂಬಂಧ ಡೆಲಿವರಿ ಏಜೆಂಟ್ ಮುನಾವರ್ ಅಲಿ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಇಜುಲ್ ಹಕ್ ಹಾಗೂ ಆರೋಪಿ ಅಲಿ ಇಬ್ಬರೂ ಅಸ್ಸಾಂ ಮೂಲದವರಾಗಿದ್ದಾರೆ. ಮೃತ ಇಜುಲ್ ಹಕ್ ವಿವಾಹಿತನಾಗಿದ್ದು, 6 ತಿಂಗಳ ಹೆಣ್ಣು ಮಗುವಿದೆ. ಪತ್ನಿ ಹಾಗೂ ಮಗು ಅಸ್ಸಾಂನಲ್ಲೇ ವಾಸವಿದ್ದು, ಒಂದು ತಿಂಗಳ ಹಿಂದಷ್ಟೇ ಆತ ಬೆಂಗಳೂರಿಗೆ ಬಂದಿದ್ದ. ಈತ ಸಲಾವುದ್ದೀನ್ ಎಂಬುವವರ ಶೆಡ್‌ನಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.
ಆರೋಪಿ ಮುನಾವರ್ ಅಲಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆಕೆಯೊಂದಿಗೆ ಹಕ್ ಅಕ್ರಮ ಸಂಬಂಧ ಹೊಂದಿದ್ದಾನೆಂದು ಅನುಮಾನ ಪಟ್ಟಿದ್ದಾನೆ. ಅದರಂತೆ ಕಳೆದ ಬುಧವಾರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಹಕ್ ಅವರ ಇಬ್ಬರು ಸ್ನೇಹಿತರಾದ ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಬೆಂಬಲಕ್ಕೆ ಬಂದಿದ್ದರು. ಇದಕ್ಲೆ ಈ ವೇಳೆ ಆರೋಪಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿ, ಹೋಗಿದ್ದಾನೆ.
ಶುಕ್ರವಾರ ಬೆಳಗಿನ ಜಾವ 3.30ರಿಂದ 4.30ರ ಸುಮಾರಿಗೆ ಶೆಡ್ ಬಳಿ ಬಂದಿರುವ ಆರೋಪಿ, ಗಾಢನಿದ್ರೆಗೆ ಜಾರಿದ್ದ ಇಜುಲ್ ಹಕ್, ಶಹನೂರ್ ರೆಹಮಾನ್ ಮತ್ತು ಫರೀದುಲ್ ಇಸ್ಲಾಂ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಘಟನೆ ವೇಳೆ ಹಕ್ ಸೋದರ ಮಾವ ರಶೀದುಲ್ ಹಕ್ ಶೆಡ್ ನಿಂದ ದೂರದಲ್ಲಿ ಮಲಗಿದ್ದು, ಮೂವರ ಕೂಗಾಟ ಕೇಳಿ ಸ್ಥಳಕ್ಕೆ ಬಂದಿದ್ದಾರೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಇಜುಲ್ ಹಕ್ ಸಾವನ್ನಪ್ಪಿದ್ದು, ಮತ್ತಿಬ್ಬರು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಾರ್ಡ್‌ನಲ್ಲಿ ಜೀವನ್ಮರಣ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಗಾಯಗೊಂಡಿರುವ ಇಬ್ಬರ ಪೈಕಿ ಶಹನೂರ್ ಆನ್‌ಲೈನ್ ಡೆಲಿವರಿ ಬಾಯ್ ಆಗಿದ್ದು, ನಾಲ್ಕು ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ. ಇನ್ನು ಫರಿದುಲ್ ಕಳೆದ ಒಂದು ವರ್ಷದಿಂದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಾರತಹಳ್ಳಿ ಪೊಲೀಸರು ಆರೋಪಿ ವಿರುದ್ಧ ಕೊಲೆ (ಬಿಎನ್‌ಎಸ್ 103) ಮತ್ತು ಕೊಲೆಯತ್ನ (ಬಿಎನ್‌ಎಸ್ 109) ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.