ನಾಪತ್ತೆಯಾಗಿದ್ದ ಮೂರು ವರ್ಷದ ಹೆಣ್ಣು ಮಗುವಿನ ಮೃತದೇಹ ಪತ್ತೆ: ತಾಯಿಯ ವಿರುದ್ಧ ಪ್ರಕರಣ ದಾಖಲು
Tuesday, May 20, 2025
ಕೊಚ್ಚಿ: ಕೇರಳದ ತಿರುವಣಿಯೂರ್ ಪಂಚಾಯತ್ ನಿಂದ ನಾಪತ್ತೆಯಾಗಿದ್ದ ಮೂರು ವರ್ಷದ ಬಾಲಕಿಯ ಮೃತದೇಹ ಮಂಗಳವಾರ ಬೆಳಗ್ಗೆ ಮೂಳಿಕುಳಂ ಸೇತುವೆ ಕೆಳಗೆ ಹರಿಯುವ ಚಾಲುಕ್ಕುಡಿ ನದಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ತಾಯಿ ಸಂಧ್ಯಾ ಎಂಬಾಕೆಯೇ ಆಕೆಯನ್ನು ನದಿಗೆ ಎಸೆದಿದ್ದಳು ಎಂದು ಆರೋಪಿಸಿ ವಶಕ್ಕೆ ಪಡೆದಿರುವ ಚೆಂಗಮನಾಡ್ ಠಾಣೆಯ ಪೊಲೀಸರು, ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಬಾಲಕಿಯು ಸಂಧ್ಯಾ ಹಾಗೂ ಆಕೆಯ ಪತಿ ಸುಭಾಷ್‌ರ ಕಿರಿಯ ಪುತ್ರಿ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ಸಂಜೆ ಮಟ್ಟುಕ್ಕುಳಿಯಲ್ಲಿರುವ ಅಂಗನವಾಡಿಯಿಂದ ತನ್ನ ಪುತ್ರಿಯನ್ನು ಸಂಧ್ಯಾ ಕರೆದೊಯ್ದಿದ್ದಾಳೆ. ಆಕೆ ತನ್ನ ಪುತ್ರಿಯನ್ನು ಕರೆದೊಯತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಬಳಿಕ, ಆಕೆ ತವರು ಮನೆ ಕುರುರಮಸ್ಸೇರಿಗೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದಳು ಎಂದು ಹೇಳಲಾಗಿದೆ.
ತಡ ಸಂಜೆಯಾದರೂ ತಾಯಿ ಮತ್ತು ಮಗು ಇಬ್ಬರೂ ಮನೆಗೆ ಮರಳದಿದ್ದುದರಿಂದ ಕುಟುಂಬದ ಸದಸ್ಯರಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಸಂಧ್ಯಾ ಪತಿ ಸುಭಾಷ್ ತಮ್ಮ ತಂದೆಯೊಂದಿಗೆ ಕೊಲಂಚೆರಿಯಲ್ಲಿನ ಆಸ್ಪತ್ರೆಯೊಂದರಲ್ಲಿದ್ದರು ಎನ್ನಲಾಗಿದೆ. ಸಂಧ್ಯಾಳ ಕುಟುಂಬದ ಸದಸ್ಯರನ್ನು ಸಂಪರ್ಕಿಸಿದಾಗ, ಆಕೆ ತಮ್ಮ ಮನೆಗೆ ಆಗಮಿಸಿಲ್ಲ ಎಂದು ತಿಳಿಸಿದ್ದಾರೆ. ಬಳಿಕ, ಸೋಮವಾರ ರಾತ್ರಿ ಏಕಾಂಗಿಯಾಗಿ ಮನೆಗೆ ಮರಳಿರುವ ಸಂಧ್ಯಾ ಮೊದಲಿಗೆ ಮಗು ಕಾಣೆಯಾಗಿದೆ ಎಂದಷ್ಟೇ ಹೇಳಿದ್ದು ಮತ್ಯಾವುದೇ ವಿವರಗಳನ್ನು ನೀಡಲು ನಿರಾಕರಿಸಿದ್ದಳು ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ವಾರ್ಡ್ ಸದಸ್ಯೆ ಬೀನಾ ಜೋಸ್, ನಂತರ ತನ್ನ ಹೇಳಿಕೆಯನ್ನು ಬದಲಿಸಿದ ಸಂಧ್ಯಾ ನಾವು ಆಳುವಾದಲ್ಲಿದ್ದಾಗ ಮಗು ನಾಪತ್ತೆಯಾಯಿತು ಎಂದು ತಿಳಿಸಿದಳು ಎಂದು ಹೇಳಿದ್ದಾರೆ. ಆದರೆ, ಈ ಹಿಂದೆ ಸಂಧ್ಯಾ ತನ್ನ ಪುತ್ರಿಯನ್ನು ನಡೆಸಿಕೊಳ್ಳುತ್ತಿದ್ದ ರೀತಿಯಿಂದಾಗಿ, ಆಕೆಯ ಹೇಳಿಕೆಯ ಬಗ್ಗೆ ತಕ್ಷಣವೇ ಅನುಮಾನಗಳು ವ್ಯಕ್ತವಾಗಿವೆ. ಇದರ ಬೆನ್ನಿಗೇ, ಈ ಕುರಿತು ಪುತೆನ್ ಕ್ರೂಝ್ ಪೊಲೀಸ್ ಠಾಣೆಗೆ ವರದಿ ಮಾಡಲಾಗಿದೆ.
ಆದರೆ, ಸಂಧ್ಯಾ ಮುಳಿಕುಳಂ ಸೇತುವೆಯ ಬಳಿ ತನ್ನ ಮಗುವನ್ನು ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ, ಆಕೆಯ ಕುಟುಂಬದ ಸದಸ್ಯರ ಅತಂಕ ಮತ್ತಷ್ಟು ದೃಢವಾಗಿದೆ. ಇದರ ಬೆನ್ನಿಗೇ, ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ನಂತರ, ಅಗ್ನಿಶಾಮಕ ದಳ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸುವುದಕ್ಕೂ ಮುನ್ನವೇ, ರಾತ್ರಿ ಸುಮಾರು 2.30ರ ವೇಳೆಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಆದರೆ, ಈ ಹತ್ಯೆಯ ಹಿಂದಿನ ಉದ್ದೇಶವೇನು ಎಂಬ ಸಂಗತಿ ಇನ್ನೂ ಬೆಳಕಿಗೆ ಬಂದಿಲ್ಲ.