ಬೆಂಗಳೂರು: ಟೀ ಕುಡಿಯುತ್ತಿದ್ದ ಟೆಕ್ಕಿಗೆ ಕಾರಿನಿಂದಿಳಿಯದೆ ಸಿಗರೇಟ್ ತಂದು ಕೊಡಲು ಆರ್ಡರ್- ಕೊಡದಿದ್ದಕ್ಕೆ ಕಾರಿನಿಂದ ಗುದ್ದಿ ಮರ್ಡರ್
Saturday, May 17, 2025
ಬೆಂಗಳೂರು: ಸಿಗರೇಟ್ ತಂದು ಕೊಡದಿದ್ದಕ್ಕೆ ಕುಪಿತಗೊಂಡು ಕಾರಿನಿಂದ ಬೈಕ್‌ಗೆ ಕಾರಿನಿಂದ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಓರ್ವ ಸಾಫ್ಟ್‌ವೇರ್ ಉದ್ಯೋಗಿ ಜೀವ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆ ಕ್ರಾಸ್‌ನ ಕನಕಪುರ ರಸ್ತೆ ತಿರುವಿನ ಬಳಿ ನಡೆದಿದೆ.
ಸಂಜಯ್ ಮೃತಪಟ್ಟ ಸಾಫ್ಟ್‌ವೇರ್ ಇಂಜಿನಿಯರ್. ಆರೋಪಿ ಕಾರು ಚಾಲಕ ಪ್ರತೀಕ್‌ನನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಹಾಗೂ ಚೇತನ್ ಎಂಬಿಬ್ಬರು ಟೆಕ್ಕಿಗಳು ವರ್ಕ್‌ಫ್ರಮ್ ಹೋಂನಲ್ಲಿದ್ದರು. ಮೇ 10ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಟೀ ಕುಡಿಯಲೆಂದು ಕೋಣನಕುಂಟೆ ಕ್ರಾಸ್‌ನಲ್ಲಿ ತಳ್ಳು ಗಾಡಿ ಬಳಿಗೆ ಬಂದಿದ್ದರು.
ಆಗ ಬರ್ತಡೇ ಪಾರ್ಟಿ ಮುಗಿಸಿಕೊಂಡು ಆರ್‌ಆರ್ ನಗರದ ಮನೆ ಕಡೆಗೆ ತೆರಳುತ್ತಿದ್ದ ಪ್ರತೀಕ್ ಎಂಬಾತ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾನೆ. ಆತ ಕಾರು ನಿಲ್ಲಿಸಿ, ಕಾರಿನಿಂದ ಕೆಳಗೆ ಇಳಿಯದೇ ಸಿಗರೇಟ್ ತಂದು ಕೊಡುವಂತೆ ಟೀ ಕುಡಿಯುತ್ತಿದ್ದ ಸಂಜಯ್ ಮತ್ತು ಚೇತನ್‌ಗೆ ಹೇಳಿದ್ದಾನೆ. ನೀನೇ ಬೇಕಿದ್ರೆ ಬಂದು ಸಿಗರೇಟ್ ತೆಗೆದುಕೊಂಡು ಹೋಗು ಎಂದು ಅವರು ತಮ್ಮ ಪಾಡಿಗೆ ತಾವು ಟೀ ಕುಡಿಯುತ್ತಿದ್ದರು.
ಈ ವೇಳೆ ಟೀ ಅಂಗಡಿ ಬಳಿಯೇ ಪ್ರತೀಕ್ ಹಾಗೂ ಕಾರಿನಲ್ಲಿದ್ದ ಆತನ ಪತ್ನಿ, ಸಾಫ್ಟ್‌ವೇರ್ ಉದ್ಯೋಗಿಗಳೊಂದಿಗೆ ಗಲಾಟೆ ಮಾಡಿದ್ದಾರೆ. ಸ್ಥಳದಲ್ಲಿದ್ದವರು ಈ ಗಲಾಟೆಯನ್ನು ತಿಳಿಗೊಳಿಸಿ ಕಳುಹಿಸಿದ್ದರು. ಸಾಫ್ಟ್‌ವೇರ್ ಉದ್ಯೋಗಿಗಳು ತಮ್ಮ R15 ಬೈಕ್ ಹತ್ತಿಕೊಂಡು ಮನೆಗೆ ಹೊರಟಿದ್ದಾರೆ. ಆದರೆ ಕೋಣನಕುಂಟೆ ಕ್ರಾಸ್‌ನ ಕನಕಪುರ ರಸ್ತೆ ತಿರುವಿನ ಬಳಿ ಬೈಕ್ ಯೂಟರ್ನ್ ತೆಗೆದುಕೊಳ್ಳುವ ಸಮಯದಲ್ಲಿ ಬೈಕ್‌ಗೆ ಕಾರಿನಿಂದ ಭೀಕರವಾಗಿ ಪ್ರತೀಕ್ ಡಿಕ್ಕಿ ಹೊಡೆದಿದ್ದಾನೆ.
ಆರೋಪಿ ಪ್ರತೀಕ್ ಕಾರಿನಿಂದ ಗುದ್ದಿದ ರಭಸಕ್ಕೆ ಸಂಜಯ್ ಬೈಕ್ ಅಂಗಡಿ ಶೆಟರ್‌ಗೆ ಬಡಿದು ಬಿದ್ದಿದೆ. ಈ ವೇಳೆ ಇಬ್ಬರು ಪ್ರಜ್ಞಾ ಹೀನರಾಗಿ ಕೆಳಗೆ ಬಿದ್ದಿದ್ದರು. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸಂಜಯ್ ಸ್ಥಿತಿ ಚಿಂತಾಜನಕ ಆಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ 2 ದಿನದ ಹಿಂದೆ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ತನಿಖೆ ನಡೆಸಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀರು ಆರೋಪಿ ಪ್ರತೀಕ್‌ನನ್ನು ಬಂಧಿಸಿದ್ದಾರೆ.