ಬೆಳ್ತಂಗಡಿ: ಅನುಮಾನಾಸ್ಪದ ರೀತಿಯಲ್ಲಿ ಯುವಕನ ಮೃತದೇಹ ಪತ್ತೆ- ಕೊಲೆ ಶಂಕೆ
Saturday, May 10, 2025
ಬೆಳ್ತಂಗಡಿ: ಯುವಕನೋರ್ವನು ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ.
ಶರತ್ (34) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ.
ಕೂಲಿ ಕೆಲಸ ಮಾಡುತ್ತಿರುವ ಶರತ್ ಶುಕ್ರವಾರ ರಾತ್ರಿ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದ. ಅಲ್ಲಿ ಮನೆಮಂದಿಯೊಂದಿಗೆ ಜಗಳವಾಗಿದೆ ಎನ್ನಲಾಗಿದೆ. ಬಳಿಕ ಮನೆಯ ಅಂಗಳದಲ್ಲಿ ಶರತ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ತಲೆಯಲ್ಲಿ ಗಾಯದ ಗುರುತುಗಳಾಗಿದೆ ಎಂದು ತಿಳಿದು ಬಂದಿದೆ.
ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಮಹಜರು ನಡೆಸಲು ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಪ್ರಕರಣದ ಕುರಿತು ನಿಖರ ಮಾಹಿತಿ ತಿಳಿದು ಬರಬೇಕಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.