ವಧುವಿಗೆ ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮೃತಪಟ್ಟ ವರ
Saturday, May 17, 2025
ಬಾಗಲಕೋಟೆ : ಇಲ್ಲಿನ ಜಮಖಂಡಿ ನಗರದ ಕಲ್ಯಾಣಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ವಧುವಿಗೆ ತಾಳಿ ಕಟ್ಟಿದ ಕೆಲವೇ ಹೊತ್ತಿನಲ್ಲಿ ವರ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ್ ಕುರಣಿ ಮೃತಪಟ್ಟ ವರ.
ಮದುವೆಗೆ ಮುನ್ನಾದಿನ ರಾತ್ರಿ ಮದುವೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿದ್ದವು. ಮರುದಿನ ಬೆಳಗ್ಗೆ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ವಧುವಿನ ಮದುವೆ ಸಮಾರಂಭ ನಡೆಯುತ್ತಿತ್ತು. ತಾಳಿ ಕಟ್ಟಿದ ಬಳಿಕ, ಅಕ್ಷತೆ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆದಿದೆ. ಮದ್ಯಾಹ್ನ ವೇದಿಕೆ ಮೇಲೆ ವಧು-ವರ ಪರಸ್ಪರ ಹಾರ ಬದಲಾಯಿಸಿದ್ದಾರೆ. ಬಂಧು-ಬಳಗದವರು ಆಗಮಿಸಿ, ಶುಭಹಾರೈಸುವುದಕ್ಕೆ ಪ್ರಾರಂಭ ಆಗುತ್ತಿದ್ದಂತೆ ಹೃದಯಾಘಾತವಾಗಿ ವರ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದರೂ, ಬದುಕಲಿಲ್ಲ. ಘಟನೆಯಿಂದ ಮದುವೆ ಸಂಭ್ರಮದ ಸಂತೋಷದಿಂದ ಇದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು.