'ಕಾಮಿಡಿ ಕಿಲಾಡಿ' ಖ್ಯಾತಿಯ ರಾಕೇಶ್ ಪೂಜಾರಿ ಹಠಾತ್ ನಿಧನ

ಉಡುಪಿ: 'ಕಾಮಿಡಿ ಕಿಲಾಡಿ' ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ಸೋಮವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲಭ್ಯ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ ರಾಕೇಶ್ ಪೂಜಾರಿ(33) ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಸ್ನೇಹಿತನ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಸ್ನೇಹಿತರೊಂದಿಗೆ ಇದ್ದಾಗಲೇ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡದ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿ- 3' ವಿಜೇತರಾಗಿದ್ದ ಅವರು, ತಮ್ಮ ವಿಭಿನ್ನ ಅಭಿನಯದಿಂದಲೇ ಕರುನಾಡಿನ ಜನಮನ ಗೆದ್ದಿದ್ದರು. 'ಕಾಮಿಡಿ ಕಿಲಾಡಿ' ಶೋನಿಂದಲೇ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿತು.

ರಾಕೇಶ್ ಅವರು ತಮ್ಮ ನಟನಾ ಪಯಣ ಆರಂಭಿಸಿದ್ದು 'ಚೈತನ್ಯ ಕಲಾವಿದರು'ಎಂಬ ನಾಟಕ ತಂಡದಿಂದ. ಬಳಿಕ 2014ರಲ್ಲಿ ಖಾಸಗಿ ಚಾನೆಲ್‌ನಲ್ಲಿ 'ಕಡ್ಲೆ ಬಜಿಲ್' ಎಂಬ ತುಳು ರಿಯಾಲಿಟಿ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು. ನಂತರ ಹಲವು ಸಿನಿಮಾಗಳಿಗೆ ಆಡಿಷನ್ ನೀಡಿದರು. ಸುಮಾರು 150 ಆಡಿಷನ್ ನೀಡಿದ್ದ ರಾಕೇಶ್ ಪೂಜಾರಿ 2018 ರಲ್ಲಿ ಜೀ ಕನ್ನಡ 'ಕಾಮಿಡಿ ಕಿಲಾಡಿಗಳು ಸೀಸನ್ 2' ಶೋಗೆ ಸೆಲೆಕ್ಟ್ ಆಗಿದ್ದರು. ಇದರಲ್ಲಿ ರನ್ನರ್ ಅಪ್ ತಂಡದ ಸದಸ್ಯರಾಗಿದ್ದರು. ಬಳಿಕ 2020ರಲ್ಲಿ 'ಕಾಮಿಡಿ ಕಿಲಾಡಿಗಳು ಸೀಸನ್ 3' ವಿಜೇತರಾಗಿದ್ದರು.

ರಾಕೇಶ್ ಅವರು ಕನ್ನಡ ಮತ್ತು ತುಳುವಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಕೇಶ್ ಕನ್ನಡದಲ್ಲಿ 'ಪೈಲ್ವಾನ್', 'ಇದು ಎಂಥಾ ಲೋಕವಯ್ಯ' ಚಿತ್ರಗಳಲ್ಲಿ ನಟಿಸಿದ್ದಾರೆ. ತುಳು ಭಾಷೆಯ 'ಪೆಟ್ಟಮ್ಮಿ', 'ಅಮ್ಮೆ‌ರ್ ಪೊಲೀಸ್', 'ಪಮ್ಮನ್ನೆ ದಿ ಗ್ರೇಟ್', 'ಉಮಿಲ್', 'ಇಲ್ಲೋಕ್ಕೆಲ್' ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಇನ್ನು ಕರಾವಳಿಯ ರಿಯಾಲಿಟಿ ಶೋಗಳಾದ 'ಬಲೆ ತೇಲಿಪಾಲೆ', 'ಮೇ 22', 'ಸ್ಟಾರ್', 'ತುಯಿನಾಯೆ ಪೋಯೆ' ಸೇರಿದಂತೆ ಕೆಲ ನಾಟಕಗಳಲ್ಲಿ ಅಭಿನಯಿಸಿದ್ದರು.

ಕಿರುತೆರೆಯಲ್ಲಿ ರಾಕೇಶ್ ಅವರು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. 'ಹಿಟ್ಲರ್ ಕಲ್ಯಾಣ' ಎನ್ನುವ ದಾರಾವಾಹಿಯಲಿ ಅವರು ನಟಿಸಿದರು.

ಅವರ ನಿಧನ ಸುದ್ದಿ ಕೇಳಿ ಕನ್ನಡ ಕಿರುತೆರೆ ಲೋಕದ ಆಘಾತಕ್ಕೆ ಒಳಗಾಗಿದೆ. 'ಕಾಮಿಡಿ ಕಿಲಾಡಿ'ಯ ತೀರ್ಪುಗಾರರು ಆಗಿದ್ದ ರಕ್ಷಿತಾ ಪ್ರೇಮ್ ಅವರು ರಾಕೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ನಗುಮುಖದ ರಾಕೇಶ, ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ ಎಂದು ಸ್ಟೋರಿ ಹಂಚಿಕೊಂಡಿದ್ದಾರೆ. ರಿಷಭ್ ಶೆಟ್ಟಿ ಅವರ 'ಕಾಂತಾರ -1'ನಲ್ಲಿನ ಶೂಟಿಂಗ್‌ನಲ್ಲಿ ಅವರು ಇತ್ತೀಚೆಗೆ ಭಾಗಿಯಾಗಿದ್ದರು.