ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ಗರಿ- ಖ್ಯಾತ ಲೇಖಕಿ ಬಾನು ಮುಷ್ತಾಕ್ 'ಹಸೀನಾ ಮತ್ತು ಇತರ ಕತೆಗಳು' ಕೃತಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ
Wednesday, May 21, 2025
ಬೆಂಗಳೂರು : ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ 'ಹಸೀನಾ ಮತ್ತು ಇತರ ಕತೆಗಳು' ಕಥಾಸಂಕಲನದ ಇಂಗ್ಲಿಷ್ ಅನುವಾದಿತ ಕೃತಿ 'ಹಾರ್ಟ್ ಲ್ಯಾಂಪ್' ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ.
ಮೇ.21ರಂದು ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತ ಘೋಷಣೆಯಾಗಿದೆ. ವಿಜೇತರಿಗೆ 50,000 ಪೌಂಡ್ ಬಹುಮಾನ ದೊರೆಯಲಿದೆ. ಈ ಬಹುಮಾನ ಲೇಖಕರು ಹಾಗೂ ಅನುವಾದಕರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
ಪ್ರಶಸ್ತಿಯ ಅಂತಿಮ ಘಟ್ಟಕ್ಕೆ ಆರು ಕೃತಿಗಳು ತಲುಪಿದ್ದವು. ಅವುಗಳ ಪೈಕಿ ಬಾನು ಮುಷ್ತಾಕ್ ಅವರ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಇದು ಕನ್ನಡ ಸಾಹಿತ್ಯಕ್ಕೆ ವಿಶ್ವ ವೇದಿಕೆಯಲ್ಲಿ ಮಹತ್ವದ ಸ್ಥಾನ ದೊರೆತಂತಾಗಿದೆ. 'ಹಾರ್ಟ್ ಲ್ಯಾಂಪ್' ಕೃತಿ ಈ ಹಿಂದೆ ಲಾಂಗ್ ಲಿಸ್ಟ್‌ಗೆ ಆಯ್ಕೆಯಾಗಿತ್ತು.
ಬಾನು ಮುಷತಾಕ್‌ರ ಈ ಕಥಾ ಸಂಕಲನವನ್ನು ದೀಪಾ ಭಸ್ತಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. 'ಹಾರ್ಟ್ ಲ್ಯಾಂಪ್' ಕಳೆದ ವರ್ಷ ಪೆನ್ ಟ್ರಾನ್ಸ್‌ಲೇಟ್ಸ್ ಪ್ರಶಸ್ತಿಯನ್ನೂ ಪಡೆದಿತ್ತು.
ಅಂತಿಮ ಹಂತದಲ್ಲಿದ್ದ ಆರು ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಎರಡು ಫ್ರೆಂಚ್ ಮತ್ತು ಡ್ಯಾನಿಶ್, ಇಟಾಲಿಯನ್, ಕನ್ನಡ ಮತ್ತು ಜಪಾನೀ ಭಾಷೆಯ ತಲಾ ಒಂದು ಕೃತಿಗಳಿದ್ದವು.