ಲಕ್ನೋ: ಜನಪ್ರಿಯ ರಿಯಾಲಿಟಿ ಶೋ ವಿಜೇತರಾಗಿದ್ದ ಗಾಯಕ ಪವನ್‌ದೀಪ್ ರಾಜನ್ ಕಾರು ಅಪಘಾತಗೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂಡಿಯನ್ ಐಡಲ್ 12ರ ವಿಜೇತ ಗಾಯಕ ಪವನ್‌ದೀಪ್ ರಾಜನ್ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಸೋಮವಾರ ನಸುಕಿನ ವೇಳೆ 3ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಅಮೋಹಾದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಪವನ್‌ದೀಪ್ ಅವರ ಎಂಜಿ ಹೆಕ್ಟರ್ ಕಾರು ನಿಲ್ಲಿಸಿದ್ದ ಐಷರ್ ಕ್ಯಾಂಟರ್‌ಗೆ ಹಿಂಭಾಗದಿಂದ ಢಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಾಯಕ ಪವನ್‌ದೀಪ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತವಾದ ಬಳಿಕ ಮೊದಲು ಗಾಯಾಳು ಪವನ್‌ದೀಪ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನೋಯ್ಡಾದ ಮತ್ತೊಂದು ಆಸ್ಪತ್ರೆಗೆ ಅವರನ್ನು ರವಾನಿಸಲಾಗಿದೆ ಎಂದು ವರದಿ ತಿಳಿಸಿದೆ.
ಪವನ್‌ದೀಪ್ ಅವರು ಉತ್ತರಾಖಂಡದ ಚಂಪಾವತ್‌ನಿಂದ ದೆಹಲಿಗೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಪವನ್‌ದೀಪ್ ರಾಜನ್ ಅವರು ಇಂಡಿಯನ್ ಐಡಲ್ 12ರ ಸೀಸನ್ ಗೆದ್ದು, 25 ಲಕ್ಷ ರೂ. ಚೆಕ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಬಹುಮಾನವಾಗಿ ಪಡೆದುಕೊಂಡಿದ್ದರು.