ಅಮೇರಿಕಾದಲ್ಲಿ ಕಾರು ಅಪಘಾತಕ್ಕೆ ಭಾರತೀಯ ವಿದ್ಯಾರ್ಥಿಗಳಿಬ್ಬರು ಬಲಿ
Tuesday, May 13, 2025
ವಾಷಿಂಗ್ಟನ್: ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟು, ಓರ್ವ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌರವ್ ಪ್ರಭಾಕರ್(23) ಮತ್ತು ಮಾನವ್ ಪಟೇಲ್(20) ಮೃತಪಟ್ಟ ದುರ್ದೈವಿಗಳು. ಇವರು ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಯೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಾಹನದ ಮುಂಭಾಗದ ಸೀಟಿನಲ್ಲಿದ್ದ ಮತ್ತೋರ್ವ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೆನ್ಸಿಲ್ವೇನಿಯಾ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಕ್ಲೀವ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳಾದ ಮಾನವ್ ಪಟೇಲ್ ಮತ್ತು ಸೌರವ್ ಪ್ರಭಾಕರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ತೀವ್ರ ದುಃಖವಾಗಿದೆ. ಈ ಸಂದರ್ಭದಲ್ಲಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಬೇಕಿರುವ ಎಲ್ಲಾ ಸಹಕಾರವನ್ನು ನೀಡುವುದಾಗಿ ಹೇಳಿದೆ.