ಮೊಬೈಲ್ ಅಂಗಡಿ ಹಿಂಬದಿ ಗೋಡೆ ಕೊರೆದು ಬೆತ್ತಲಾಗಿ ಹೊಕ್ಕ ಕತರ್ನಾಕ್ ಕಳ್ಳ- 85ಮೊಬೈಲ್ ಕದ್ದು ಪರಾರಿ

ಬೆಂಗಳೂರು: ನಗರದ ಮೊಬೈಲ್ ಅಂಗಡಿಯ ಹಿಂಭಾಗದ ಗೋಡೆಯನ್ನು ಕೊರೆದು ಬೆತ್ತಲಾಗಿ ಒಳನುಗ್ಗಿರುವ ಕತರ್ನಾಕ್ ಕಳ್ಳನೋರ್ವನು ವಿವಿಧ ಕಂಪನಿಗಳ 85 ಮೊಬೈಲ್‌ಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನಹಳ್ಳಿಯ ಹೊಂಗಸಂದ್ರ ಬಳಿಯ ದಿನೇಶ್ ಎಂಬವರಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್‌ನಲ್ಲಿ ಮೇ 9ರಂದು ಮಧ್ಯರಾತ್ರಿ ಈ ಕಳವು ನಡೆದಿದೆ. ಈ ಬಗ್ಗೆ ಬಂದಿರುವ ದೂರನ್ನು ಆಧರಿಸಿ ಎಫ್‌ಐಆ‌ರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನೇಶ್‌ ಹಲವು ವರ್ಷಗಳಿಂದ ಹೊಂಗಸಂದ್ರದಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದಾರೆ. ಮೇ 9ರಂದು ಎಂದಿನಂತೆ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಪೂರ್ವಸಂಚಿನಂತೆ ಮಧ್ಯರಾತ್ರಿ ಬಂದ ಕಳ್ಳ ಕೃತ್ಯ ಎಸಗಿದ್ದಾನೆ. ಮುಖಚಹರೆ ಗೊತ್ತಾಗದಿರಲು ಮಾಸ್ಕ್ ಹಾಕಿದ್ದ. ಅಂಗಡಿ ಮಾಲಕರು ಬೆಳಗ್ಗೆ ಬಂದು ನೋಡಿದಾಗ ಕೃತ್ಯ ಗೊತ್ತಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಆರೋಪಿ ಧರಿಸಿರುವ ಬಟ್ಟೆ ಆಧರಿಸಿ ಬಂಧಿಸಿರುವುದನ್ನು ತಿಳಿದುಕೊಂಡಿದ್ದ ಕಳ್ಳ ಪೊಲೀಸರನ್ನು ಯಾಮಾರಿಸಲು ಬೆತ್ತಲೆಯಾಗಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.