ಮೇ 30: ಬಹುನಿರೀಕ್ಷಿತ "ಸ್ಕೂಲ್ ಲೀಡರ್“ ಕರಾವಳಿಯಾದ್ಯಂತ ಬಿಡುಗಡೆ
Wednesday, May 28, 2025
ಮಂಗಳೂರು: ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹುನಿರೀಕ್ಷಿತ ಸ್ಕೂಲ್ ಲೀಡರ್ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು ಮೇ 30ರಿಂದ ಕರಾವಳಿಯಾದ್ಯಂತ ಬೆಳ್ಳಿ ತರೆಯ ಮೇಲೆ ರಾರಾಜಿಸಲಿದೆ.
ಚಿತ್ರದ ಟ್ರೇಲರ್ ಹಾಗೂ ಓಟು ಓಟು ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು ಸಿನಿಪ್ರಿಯರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ.
ನಿರ್ಮಾಪಕರಾದ ಕೆ.ಸತ್ಯೇಂದ್ರ ಪೈ ಇವರು ಈ ಹಿಂದೆ “ಗಂಧದ ಕುಡಿ” ಎಂಬ ಚಿತ್ರವನ್ನು ನಿರ್ಮಿಸಿದ್ದು ಆ ಚಿತ್ರವು ದೇಶ ವಿದೇಶಗಳಲ್ಲಿ 22 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು.ಈ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕರಾದ ರಝಾಕ್ ಪತ್ತೂರು ಇವರು ಸ್ಕೂಲ್ ಲೀಡರ್ ಚಿತ್ರವನ್ನು ಕಥೆ, ಚಿತ್ರ ಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಗೀತೆ ರಚನೆಗಾಗಿ ರಝಾಕ್ ಪುತ್ತೂರು ಇವರು 2019 ನೇ ಸಾಲಿನ ಅತ್ಯುತ್ತಮ ಚಿತ್ರ ಸಾಹಿತಿ ರಾಜ್ಯ ಪ್ರಶಸ್ತಿ ಗೆ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಸ್ಕೂಲ್ ಲೀಡರ್ ಸಿನಿಮಾ ಹೈಸ್ಕೂಲ್ ಮಕ್ಕಳ ಮನೋ ವಿಕಾಸ,ಶೈಕ್ಷಣಿಕ ಬದುಕು ಮತ್ತು ಮಕ್ಕಳಲ್ಲಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಳ್ಳುವ ಕಥಾವಸ್ತುವನ್ನು ಹೊಂದಿದೆ.
ಗಂಭೀರ ಕತೆಯನ್ನು ಹಾಸ್ಯದ ಲೇಪನದೊಂದಿಗೆ ಪ್ರೇಕ್ಷಕರಿಗೆ ಉಣಬಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಇದು ಶಾಲಾ ಚುನಾವಣೆಯನ್ನು ಆಧರಿಸಿದ ಕಥೆಯಾದುದರಿಂದ ಇಡೀ ಸಿನಿಮಾವನ್ನು ಕಟಪಾಡಿಯ ಒಂದೇ ಶಾಲೆಯಲಿ, ಚಿತ್ರೀಕರಿಸಲಾಗಿದೆ.ಸುಮಾರು 25 ಶಾಲೆಯ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ.
ತುಳು ಚಿತ್ರ ರಂಗದ ದಿಗ್ಗಜರಾದ ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ ಮುಂತಾದವರು ಹೊಸ ಬಗೆಯ ಹಾಸ್ಯ ಮತ್ತು ಮ್ಯಾನರಿಸಂ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಇಟ್ಟರೆ, ಕನ್ನಡದ ಹಿರಿಯ ನಟ ರಮೇಶ್ ಭಟ್ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಛಾಯಾಗ್ರಾಹಕರಾಗಿ ಮೋಹನ್ ಪಡ್ರೆ, ಜಯಕಾರ್ತಿ ಯವರ ಸಂಗೀತ, ಸಚಿನ್ ರಾಮ್ ಸಂಕಲನ, ಆಶಿಶ್ ಅಂಚನ್ ನೃತ್ಯ ನಿರ್ದೇಶನ ಮತ್ತು ಅಕ್ಷತ್ ವಿಟ್ಲ, ಸಹ ನಿರ್ದೇಶಕರಾಗಿದ್ದು ಸುದರ್ಶನ್ ಶಂಕರ್ ಹಾಗೂ ಎಂ ಎಂ ವಿಮಲ್ ಸಹ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರ ನಿರ್ಮಾಣದ ಮೇಲ್ವಿಚಾರಣೆಯನ್ನು
ಮುತ್ತು ನಾಟಕ ಖ್ಯಾತಿಯ ನಾಗೇಶ್ ಕಾಮತ್ ಕಟಪಾಡಿ ನಿರ್ವಹಿಸುವುದರ ಜೊತೆಗೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಸ್ಯದ ಜೊತೆಗೆ ಅತ್ಯುತ್ತಮ ಸಂದೇಶವನ್ನು ನೀಡುವ ಈ ಸಿನಿಮಾ ಎಲ್ಲಾ ವಯೋಮಾನದ ಸಿನಿಪ್ರಿಯರ ಮನ ತಲುಪಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ರಝಾಕ್ ಪುತ್ತೂರು, ನಿರ್ಮಾಪಕ ಕೆ.ಸತ್ಯೇಂದ್ರ ಪೈ, ಸುದರ್ಶನ್ ಶಂಕರ್, ಹಂಚಿಕೆದಾರ ಬಾಲಕೃಷ್ಣ ಶೆಟ್ಟಿ, ಅಕ್ಷತ್ ವಿಟ್ಲ, ಮೋಹನ್ ಪಡ್ರೆ ಮತ್ತಿತರರು ಉಪಸ್ಥಿತರಿದ್ದರು.