ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮ : 10 ಕೋಟಿ ದೇಣಿಗೆ ಸಂಗ್ರಹದ ಗುರಿ: ಪಟ್ಲ ಸತೀಶ್ ಶೆಟ್ಟಿ


ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ದಶಮ ಸಂಭ್ರಮದ ಹಿನ್ನಲೆಯಲ್ಲಿ ಈ ಬಾರಿ ದಾನಿಗಳಿಂದ, ಕಲಾ ಪೋಷಕರಿಂದ   ಕನಿಷ್ಠ 10 ಕೋಟಿ ದೇಣಿಗೆಯನ್ನು ಸಂಗ್ರಹಿಸಿಡಲು ತೀರ್ಮಾನಿಸಿದೆ. ಬಳಿಕ ಇದೇ ಹಣದಿಂದ ಕಲಾವಿದರಿಗೆ ನೆರವು ನೀಡಲಾಗುವುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.


ಜೂನ್ 1 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಪಟ್ಲ ದಶಮ ಸಂಭ್ರಮ ಕಾರ್ಯಕ್ರಮದ ಕುರಿತು ಬಲ್ಲಾಲ್ ಬಾಗ್ ಪತ್ತುಮುಡಿಯಲ್ಲಿ ನಡೆದ  ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಲ ದಶಮ ಸಂಭ್ರಮದ ಹಿನ್ನಲೆಯಲ್ಲಿ ಎಲ್ಲಾ ಘಟಕಗಳಿಗೆ ಜವಾಬ್ದಾರಿಯನ್ನು ಹಂಚಿ ಕೊಡಲಾಗುವುದು. ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ 15 ಕೋಟಿ ರೂಪಾಯಿ ಮೊತ್ತದ ಸೇವಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಪ್ರತೀ ವರ್ಷ ಹಣ ಸಂಗ್ರಹಿಸುವುದನ್ನು ಬಿಟ್ಟು 10 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸುವ ಗುರಿ ಹೊಂದಿದೆ. ಎಲ್ಲಾ ಘಟಕಗಳು ಕನಿಷ್ಠ ಹತ್ತು ಮಂದಿ ಟ್ರಸ್ಟಿಗಳನ್ನು ಮಾಡಿ ಫೌಂಡೇಶನ್ ಟ್ರಸ್ಟ್ ಗೆ ನೆರವಾಗಿ ಎಂದು ಪಟ್ಲ ಸತೀಶ್ ಶೆಟ್ಟಿ ವಿನಂತಿಸಿದರು. ಎಲ್ಲಾ ಘಟಕಗಳು ಸಕ್ರೀಯವಾಗಿ ತೊಡಗಿಕೊಂಡಿದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ಘಟಕಗಳ ರಚನೆಯಾಗ ಬೇಕಿದೆ. ಜೂನ್ 1 ರಂದು ಅಡ್ಯಾರ್ ನಲ್ಲಿ ನಡೆಯುವ ಪಟ್ಲ ದಶಮ ಸಂಭ್ರಮಕ್ಕೆ ಎಲ್ಲರ ಸಹಕಾರ ಬೇಕು ಎಂದರು.


ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಪುರುಪೋತ್ತಮ ಭಂಡಾರಿ ಅಡ್ಯಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಉದ್ಯಮಿ ಸುರೇಶ್ ಭಂಡಾರಿ ಕಡಂದಲೆ,  ಸೀತಾರಾಮ ತೋಳ್ಪಾಡಿತ್ತಾಯ, ಭುಜಬಲಿ ಧರ್ಮಸ್ಥಳ, ಜಯರಾಮ ಶೇಖ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ,  ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು. ಪ್ರಭಾಕರ ಜೋಷಿ, ಸರಪಾಡಿ ಅಶೋಕ್ ಶೆಟ್ಟಿ, ಸಂತೋಷ್ ಶೆಟ್ಟಿ ಬೊಳಿಯಾರು, ವಿದುಷಿ ಲತಾ ನಾಗರಾಜ್ ಶೆಟ್ಟಿ ಅನಿಸಿಕೆಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಸ್ವಾಗತಿಸಿ ಕಾರ್ಯಕ್ರಮ‌ ನಿರೂಪಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು.