ಕೇವಲ 1ರೂ. ಹಾಗೂ ತೆಂಗಿನಕಾಯಿ ಮಾತ್ರ ವರದಕ್ಷಿಣೆ ಪಡೆದು 31ಲಕ್ಷ ರೂ. ಹಿಂದಿರುಗಿಸಿದ ವರ
Sunday, May 4, 2025
ಹರಿಯಾಣ: ವರದಕ್ಷಿಣೆ ಪಿಡುಗು ಈ ಸಮಾಜದಿಂದ ಮರೆಯಾದಂತಿಲ್ಲ. ವರದಕ್ಷಿಣೆ ಕಿರುಕುಳದ ಸುದ್ದಿ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಯುವಕ ವರದಕ್ಷಿಣೆ ವಿಚಾರದಲ್ಲಿ ನಡೆದುಕೊಂಡ ರೀತಿ ಅನೇಕರಿಗೆ ಮಾದರಿಯಾಗಿದೆ. ತನ್ನ ಅತ್ತೆ-ಮಾವ ಮದುವೆ ಉಡುಗೊರೆಯಾಗಿ ನೀಡಿದ್ದ 31 ಲಕ್ಷ ರೂ. ವರದಕ್ಷಿಣೆಯನ್ನು ಅವನು ನಯವಾಗಿ ತಿರಸ್ಕರಿಸಿ, ವಧುವೇ ತನಗೆ ನಿಜವಾದ ಉಡುಗೊರೆ ಎಂದ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಭಬ್ಬಿ ರಾಯ್‌ಪುರ ಗ್ರಾಮದ ನಿವಾಸಿ ವಿಕಾಸ್ ರಾಣಾ ಓರ್ವ ನ್ಯಾಯವಾದಿ. ಅವರ ತಂದೆ ಶ್ರೀಪಾಲ್ ರಾಣಾ ಈ ಹಿಂದೆ ಬಹುಜನ ಸಮಾಜ ಪಕ್ಷದಿಂದ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿದ್ದರು. ಹರಿಯಾಣದ ಲುಖಿ ಗ್ರಾಮದ ಅಗ್ರಿಕಾ ತನ್ವರ್ ಅವರನ್ನು ವಿಕಾಸ್ ವಿವಾಹವಾಗಲು ಸಿದ್ದತೆ ಮಾಡಿದ್ದರು.
ವಿಕಾಸ್ ರಾಣಾ ಎ.30ರಂದು ತನ್ನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಕುರುಕ್ಷೇತ್ರ ತಲುಪಿದರು. ಅಲ್ಲಿನ ಹೋಟೆಲ್‌ನಲ್ಲಿ ವಿವಾಹ ಸಮಾರಂಭಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ವಿವಾಹ ಸಮಾರಂಭದ ಭಾಗವಾಗಿ, ವಧುವಿನ ಪೋಷಕರು ಸಂಪ್ರದಾಯದಂತೆ ವರ ವಿಕಾಸ್ ರಾಣಾಗೆ ವರದಕ್ಷಿಣೆಯಾಗಿ 31 ಲಕ್ಷ ರೂ. ನಗದು ನೀಡಲು ಮುಂದಾಗಿದ್ದಾರೆ. ಆದರೆ, ವಿಕಾಸ್ ಆ ದೊಡ್ಡ ಮೊತ್ತವನ್ನು ವಿನಮ್ರವಾಗಿ ನಿರಾಕರಿಸಿದರು.
ವಿಕಾಸ್ ಅವರ ತಂದೆ ತಮ್ಮ ಭಾವಿ ಸೊಸೆ ಅಗ್ರಿಕಾ ತನ್ವರ್ ನಿಜವಾದ ಉಡುಗೊರೆಯಾಗಿದ್ದು, ನಮಗೆ ವರದಕ್ಷಿಣೆ ಅಗತ್ಯವಿಲ್ಲ. ವರನ ಇಚ್ಛೆಯಂತೆ ಕೇವಲ 1 ರೂ. ನಾಣ್ಯ ಮತ್ತು ತೆಂಗಿನಕಾಯಿಯೊಂದಿಗೆ ವಿವಾಹ ದಾರೆಯು ಸಾಂಪ್ರದಾಯಿಕ ರೀತಿಯಲ್ಲಿ ಪೂರ್ಣಗೊಂಡಿತು. ವರದಕ್ಷಿಣೆ ಸಂಬಂಧಿತ ದೌರ್ಜನ್ಯಗಳ ಪ್ರಸ್ತುತ ಯುಗದಲ್ಲಿ, ವಿಕಾಸ್ ರಾಣಾ ತೆಗೆದುಕೊಂಡ ಈ ನಿರ್ಧಾರವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶ ಎಂದು ಹಲವರು ಹೇಳುತ್ತಿದ್ದಾರೆ.