ಲಕ್ನೋ: ಪತ್ನಿ ಹಾಗೂ ಆಕೆಯ ತವರು ಮನೆಯವರ ಕಿರುಕುಳವನ್ನು ಸಹಿಸಲಾರದೆ 33 ವರ್ಷದ ಇಂಜಿನಿಯರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ.
ಮೋಹಿತ್ ಯಾದವ್ ಆತ್ಮಹತ್ಯೆ ಮಾಡಿಕೊಂಡವರು. ಔರಾಯಿಯಾ ಜಿಲ್ಲೆಯ ನಿವಾಸಿ ಯಾದವ್ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಫೀಲ್ಡ್ ಇಂಜಿನಿಯರ್ ಆಗಿದ್ದರು. ಮೋಹಿತ್ ಹಾಗೂ ಪ್ರಿಯಾ 7ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2023ರಲ್ಲಿ ಇಬ್ಬರೂ ವಿವಾಹವಾಗಿದ್ದರು.
ಗುರುವಾರ ಇಟಾವಾ ರೈಲು ನಿಲ್ದಾಣದ ಹೊರಭಾಗದಲ್ಲಿರುವ ಹೋಟೆಲೊಂದರಲ್ಲಿ ಮೋಹಿತ್ ಯಾದವ್ ರೂಂ ಒಂದನ್ನು ಬಾಡಿಗೆ ಪಡೆದುಕೊಂಡಿದ್ದರು. ಮರುದಿನ ಬೆಳಗ್ಗೆ ಅವರು ಕೊಠಡಿಯನ್ನು ತೊರೆಯಲಿಲ್ಲ. ಸಂಜೆಯ ವೇಳೆಗೆ ಹೊಟೇಲ್ ಸಿಬ್ಬಂದಿಯು ಮೋಹಿತ್ ನೇಣುಗಿಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದನ್ನು ಕಂಡಿದ್ದಾರೆ ಎಂದು ನಗರ ಪೊಲೀಸ್ ಆಧೀಕ್ಷಕ ಅಭಯಾಥ್ ತ್ರಿಪಾಠಿ ತಿಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅವರು ವೀಡಿಯೋ ಮಾಡಿದ್ದಾರೆ. ಈ ವೀಡಿಯೋದಲ್ಲಿ ಅವರು ''ತನ್ನ ಪತ್ನಿಯ ಮನೆಯವರು ತನಗೆ ಬೆದರಿಕೆಗಳನ್ನು ಒಡ್ಡುತ್ತಿದ್ದಾರೆ ಹಾಗೂ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ" ಎಂದು ಆರೋಪಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕಾಗಿ ಹೆತ್ತವರ ಕ್ಷಮೆ ಯಾಚಿಸಿದ ಮೋಹಿತ್ ಯಾದವ್, ಒಂದು ವೇಳೆ ತನ್ನ ಸಾವಿನ ಬಳಿಕ ತನಗೆ ನ್ಯಾಯ ದೊರಕದಿದ್ದಲ್ಲಿ ತನ್ನ ಚಿತಾಭಸ್ಮವನ್ನು ಚರಂಡಿಗೆ ಎಸೆಯಬೇಕೆಂದು ಹೇಳಿದ್ದಾರೆ.
ಎರಡು ತಿಂಗಳುಗಳ ಹಿಂದೆ ಪತ್ನಿ ಪ್ರಿಯಾಗೆ ಖಾಸಗಿ ಶಿಕ್ಷಣಸಂಸ್ಥೆಯೊಂದರಲ್ಲಿ ಅಧ್ಯಾಪಕಿಯಾಗಿ ಕೆಲಸ ದೊರೆತಿತ್ತು. ಆಗ ಆಕೆ ಗರ್ಭಿಣಿಯಾಗಿದ್ದರು. ಆದರೆ ಪ್ರಿಯಾ ತಾಯಿ ಆಕೆಯ ಗರ್ಭಪಾತ ಮಾಡಿಸಿದ್ದರೆಂದು ಯಾದವ್ ವೀಡಿಯೊದಲ್ಲಿ ಆರೋಪಿಸಿದ್ದಾರೆ. ತನ್ನ ಪತ್ನಿಯ ಎಲ್ಲಾ ಒಡವೆಗಳನ್ನು ಅತ್ತೆಯೇ ಇರಿಸಿಕೊಂಡಿದ್ದಾರೆ. ನಾನು ವರದಕ್ಷಿಣೆಯ ಬೇಡಿಕೆ ಇಟ್ಟಿರಲಿಲ್ಲ. ಆದರೆ ಪತ್ನಿಯು ತನ್ನ ಮನೆ ಹಾಗೂ ಆಸ್ತಿಯನ್ನು ಆಕೆಯ ಹೆಸರಿಗೆ ನೋಂದಾಯಿಸದೆ ಇದ್ದಲ್ಲಿ, ತನ್ನ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳದ ಸುಳ್ಳು ಪ್ರಕರಣ ಬೆದರಿಕೆಯೊಡ್ಡಿದ್ದಳೆಂದು ದಾಖಲಿಸುವುದಾಗಿ ಮೋಹಿತ್ ವೀಡಿಯೊದಲ್ಲಿ ಹೇಳಿದ್ದಾರೆ. ಆಕೆಯ ತಂದೆ ಮನೋಜ್ ಕುಮಾರ್ ಸುಳ್ಳು ದೂರನ್ನು ದಾಖಲಿಸಿದ್ದಾರೆ. ಆಕೆಯ ಸಹೋದರನ್ನು ತನ್ನನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದ ಎಂದು ಯಾದವ್ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯರು ದಾಖಲಿಸುವ ಸುಳ್ಳು ದೂರುಗಳಿಂದ ಪುರುಷರನ್ನು ರಕ್ಷಿಸುವಂತಹ ಕಾನೂನು ದೇಶದಲ್ಲಿ ಇಲ್ಲದಿರುವ ಬಗ್ಗೆಯೂ ಆತ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಪುರುಷರ ರಕ್ಷಣೆಗೂ ಕಾನೂನೇನಾದರೂ ಇದ್ದಲ್ಲಿ ತಾನು ಇಂತಹ ಹೆಜ್ಜೆಯನ್ನಿಡುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಆತ ಹೇಳಿದ್ದರು.