-->

ಕೊಲೆ ಮಾಡದೇ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ ವ್ಯಕ್ತಿ- ಮೃತಪಟ್ಟಿದ್ದ ಪತ್ನಿ ಐದು ವರ್ಷಗಳ ಬಳಿಕ ಪ್ರತ್ಯಕ್ಷ

ಕೊಲೆ ಮಾಡದೇ ಎರಡು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿದ ವ್ಯಕ್ತಿ- ಮೃತಪಟ್ಟಿದ್ದ ಪತ್ನಿ ಐದು ವರ್ಷಗಳ ಬಳಿಕ ಪ್ರತ್ಯಕ್ಷ


ಮೈಸೂರು: ಪೊಲೀಸ್ ಎಡವಟ್ಟಿನಿಂದ ವ್ಯಕ್ತಿಯೋರ್ವರು ಪತ್ನಿಯ ಕೊಲೆ ಆರೋಪದಲ್ಲಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಇದೀಗ 'ಮೃತಪಟ್ಟಿದ್ದ' ಪತ್ನಿ ಪ್ರಿಯಕರನೊಂದಿಗೆ ಪ್ರತ್ಯಕ್ಷಗೊಂಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಮಲ್ಲಿಗೆ ಎಂಬಾಕೆ ಹತ್ಯೆಯಾಗಿದ್ದಾಳೆ ಎಂದು ಹೇಳಲಾಗಿರುವ ಐದು ವರ್ಷದ ಬಳಿಕ ಪ್ರತ್ಯಕ್ಷಗೊಂಡ ಪತ್ನಿ. ಈಕೆಗೆ ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದ ಯುವಕ ಸುರೇಶ್ ಎಂಬವನೊಂದಿಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, 2020ರ ನವೆಂಬರ್‌ನಲ್ಲಿ ಏಕಾಏಕಿ ಪತ್ನಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಪತ್ನಿ ನಾಪತ್ತೆ ಬಗ್ಗೆ ಸುರೇಶ್ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಒಂದಷ್ಟು ದಿನ ಹುಡುಕಿದರೂ ಮಲ್ಲಿಗೆ ಸಿಕ್ಕಿಲ್ಲ. ಹಾಗಾಗಿ ಎಲ್ಲರೂ ಸುಮ್ಮನಾಗಿದ್ದರು ಎನ್ನಲಾಗಿದೆ.

ಆದರೆ 2021ರ ಜೂನ್‌ನಲ್ಲಿ ಕುಶಾಲನಗರಕ್ಕೆ ಬಂದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್‌ ಠಾಣೆಯ ಸಿಬ್ಬಂದಿ ಸುರೇಶ್ ಅವರನ್ನು 'ಮಹಿಳೆಯೊಬ್ಬರ ಮೃತದೇಹ ಸಿಕ್ಕಿದೆ' ಎಂದು ಗುರುತು ಪತ್ತೆ ಮಾಡುವಂತೆ ಕರೆದುಕೊಂಡು ಹೋಗಿದ್ದರು. ಬಳಿಕ ಇದೇ ಪ್ರಕರಣದಲ್ಲಿ 2021ರ ಜು.18ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ಕೂಡ ದಾಖಲಾಗಿ ಬಳಿಕ ಅವರು ಜೈಲು ಸೇರಿದ್ದರು.

ಸುರೇಶ್ ಪರ ವಕೀಲ ಪಾಂಡು ಪೂಜಾರಿ ವಾದ ಮಂಡಿಸಿದ್ದರು. 2022ರ ಜನವರಿಯಲ್ಲಿ ವಕೀಲರ ಮನವಿಯ ಹಿನ್ನೆಲೆಯಲ್ಲಿ ನ್ಯಾಯಾಲಯ ಮಹಿಳೆಯ ಅಸ್ತಿಪಂಜರ ಹಾಗೂ ಮಲ್ಲಿಗೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ 'ಮೃತದೇಹ ಮಲ್ಲಿಗೆಯದ್ದಲ್ಲ' ಎಂಬ ವರದಿ ಬಂದಿತ್ತು. ಈ ವೇಳೆಗಾಗಲೇ ಎರಡು ವರ್ಷ ಸುರೇಶ್ ಅವರು ಹತ್ಯೆ ಆರೋಪದಡಿ ಜೈಲು ಶಿಕ್ಷೆ ಅನುಭವಿಸಿದ್ದರು. 2023ರಲ್ಲಿ ಹೈಕೋರ್ಟ್ ಮೂಲಕ ಸುರೇಶ್ ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಬಳಿಕ 'ಮೃತ ಮಹಿಳೆ ತನ್ನ ಹೆಂಡತಿಯಲ್ಲ, ಪತ್ನಿಯನ್ನು ಹುಡುಕಿಕೊಡಿ' ಎಂದು ಸುರೇಶ್‌ ಮತ್ತೆ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಮೃತಪಟಿದ್ದಾಳೆ ಎಂಬುದಾಗಿ‌ಭಾವಿಸಲಾಗಿದ್ದ ಪತ್ನಿ ಮಲ್ಲಿಗೆ ಜೀವಂತವಾಗಿ ಮಡಿಕೇರಿಯ ಹೋಟೆಲ್‌ವೊಂದಲ್ಲಿ ಪ್ರಿಯಕರನೊಂದಿಗೆ ಎಪ್ರಿಲ್ 1 ರಂದು ತಿಂಡಿ ತಿನ್ನುತ್ತಿದ್ದಳು. ಇದನ್ನು ಗಮನಿಸಿ ಪತಿ ಸುರೇಶ್ ಸ್ನೇಹಿತರು ಶಾಕ್ ಆಗಿದ್ದಾರೆ. ತಕ್ಷಣ ಸುರೇಶ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಬಳಿಕ ಮಡಿಕೇರಿ ಪೊಲೀಸರಿಗೆ ವಿಷಯ ಮುಟ್ಟಿಸಿ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆಯಲ್ಲಿ ಪ್ರಿಯಕರ ಗಣೇಶನ ಜೊತೆ ವಿರಾಜಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.

ಸದ್ಯ ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮಲ್ಲಿಗೆಯನ್ನು ಮೈಸೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಹೆಚ್ಚುವರಿ ತನಿಖೆ ಕೈಗೊಳ್ಳಲಾಗಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article