ದಾಂಡೇಲಿಯ ಮನೆಯೊಂದರಲ್ಲಿ ಬರೋಬ್ಬರಿ 14ಕೋಟಿ ರೂ. ನಕಲಿ ನೋಟು ಪತ್ತೆ- 500 ರೂ. ಮುಖಬೆಲೆಯ ರಾಶಿರಾಶಿ ನೋಟುಗಳನ್ನು ಕಂಡು ದಂಗಾದ ಪೊಲೀಸರು


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮನೆಯೊಂದರಲ್ಲಿ 500 ರೂಪಾಯಿ ಮುಖಬೆಲೆಯ 14 ಕೋಟಿ ಖೋಟಾ ನೋಟುಗಳು ಪತ್ತೆಯಾಗಿದ್ದು, ಇದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.

ದಾಂಡೇಲಿಯ ಗಾಂಧಿ ನಗರದ ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ ಬರೋಬ್ಬರಿ 14 ಕೋಟಿ ರೂ. ನಕಲಿ ನೋಟುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಖಚಿತ ಮಾಹಿತಿ ಮೇರೆಗೆ ನಗರ ಠಾಣಾ ಪೊಲೀಸರು ದಾಳಿ ನಡೆಸಿ ನಕಲಿ ನೋಟುಗಳು ಹಾಗೂ ಹಣ ಏಣಿಸುವ ಯಂತ್ರವನ್ನು ವಶಪಡಿಸಿದ್ದಾರೆ. ನೂರ್‌ಜಾನ್‌ ಜುಂಜುವಾಡ್ಕರ ಎಂಬವರಿಗೆ ಸೇರಿರುವ ಈ ಮನೆಯಲ್ಲಿ ಗೋವಾ ಮೂಲದ ಅರ್ಷದ್ ಬಾಡಿಗೆಗೆ ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿದ್ದಾರೆ. ಅಲ್ಲದೆ ಮನೆಯ ಹಿಂಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ಮಾಡಿದಾಗ ನಕಲಿ ನೋಟುಗಳು ಪತ್ತೆಯಾಗಿದೆ.

500 ರೂ. ನೋಟಿನ ಮೇಲೆ ರಿವರ್ಸ್ ಬ್ಯಾಂಕ್ ಆಫ್ ಇಂಡಿಯಾ ಎಂಬ ಬರಹ ಇದ್ದು ಗವರ್ನರ್ ಸಹಿ ಖಾಲಿ ಬಿಡಲಾಗಿದೆ. ಸಂಖ್ಯೆಗಳಿರಬೇಕಾದ ಜಾಗದಲ್ಲಿ ಸೊನ್ನೆಯನ್ನಷ್ಟೇ ನಮೂದಿಸಲಾಗಿದೆ. ಮೂವಿ ಶೂಟಿಂಗ್ ಪರ್ಪಸ್ ಓನ್ಲಿ ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ಅಂದಾಜು 14 ಕೋಟಿ ರೂ. ನಕಲಿ ನೋಟುಗಳು ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿದ್ದಾರೆ. ಸದ್ಯ ಅರ್ಷದ್ ಖಾನ್ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.