ಕೆರೆಬಿಯನ್ ದೇಶದಲ್ಲಿ ಬಿಕಿನಿಯಲ್ಲಿ ದಿಢೀರ್ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ
Wednesday, March 12, 2025
ನವದೆಹಲಿ: ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ ಕೊನಂಕಿ(20) ಏಕಾಏಕಿ ನಾಪತ್ತೆಯಾಗಿರುವ ವಿಚಾರ ಭಾರೀ ಸಂಚಲನ ಸೃಷ್ಟಿಸಿದೆ.
ಕೆರಿಬಿಯನ್ ದೇಶಕ್ಕೆ ರಜೆಯಲ್ಲಿ ಟೂರ್ ಹೋಗಿದ್ದ ಸುದೀಕ್ಷಾ ಬೀಚ್‌ನಲ್ಲಿ ಅಡ್ಡಾಡುವಾಗ ದಿಢೀರ್ ನಾಪತ್ತೆಯಾಗಿದ್ದಾರೆ. ಆಕೆಗಾಗಿ ಭಾರಿ ಹುಡುಕಾಟ ನಡೆಸಲಾಗುತ್ತಿದೆ. ಈ ವಿಚಾರ ತಿಳಿದ ತಕ್ಷಣ ಅವರ ಪಾಲಕರು ಪುತ್ರಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮೂಲದ ವಿದ್ಯಾರ್ಥಿನಿ ಸುದೀಕ್ಷಾ, ಅಮೆರಿಕಾದ ವರ್ಜೀನಿಯಾದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ವಾರ, ರಜೆಯ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಕೆರಿಬಿಯನ್ ದೇಶಕ್ಕೆ ರಜೆಯ ಪ್ರವಾಸ ಹೋಗಿದ್ದರು. ಐದು ಯುವತಿಯರೊಂದಿಗೆ ಡೊಮಿನಿಕನ್ ಗಣರಾಜ್ಯದ ಜನಪ್ರಿಯ ಪ್ರವಾಸಿ ಪಟ್ಟಣವಾದ ಪಂಟಾ ಕಾನಾಕ್ಕೆ ಭೇಟಿ ನೀಡಿದರು.
ಆಕೆ ಮಾರ್ಚ್ 6ರಂದು, ರಿಯು ರಿಪಬ್ಲಿಕಾ ರೆಸಾರ್ಟ್‌ನಲ್ಲಿ ಕಡಲತೀರದ ಉದ್ದಕ್ಕೂ ಬಿಕಿನಿ ಧರಿಸಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಬಳಿಕ, ಅವರು ಇದ್ದಕ್ಕಿಂದ್ದಂತೆ ನಾಪತ್ತೆಯಾಗಿದ್ದಾರೆ. ತಕ್ಷಣ ಅವರು ಸ್ನೇಹಿತೆಯರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ದೂರು ದಾಖಲಿಸಿದ್ದಾರೆ. ಕಳೆದ ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ರಿಯು ರಿಪಬ್ಲಿಕಾ ರೆಸಾರ್ಟ್ ಬೀಚ್‌ನಲ್ಲಿ ಆಕೆ ಕೊನೆಯ ಬಾರಿಗೆ ಕಾಣಿಸಿಕೊಂಡಳು.
ದೂರು ಸ್ವೀಕರಿಸಿ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು ಆಕೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಡ್ರೋನ್ ಮತ್ತು ಹೆಲಿಕಾಪ್ಟರ್ ಬಳಸಿ ಬೀಚ್ ಮತ್ತು ಸಮುದ್ರದಲ್ಲಿ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.
ಈ ಸಂದರ್ಭ, ಆಕೆಯ ತಂದೆ ಕೆನ್ನೆಲಿಕ್ ಸುಬ್ಬರಾಯುಡು ಮಾತನಾಡಿ, ಕಾಣೆಯಾದ ಸುದೀಕ್ಷಾಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಅವರು ರೆಸಾರ್ಟ್ ಪ್ರದೇಶ ಮತ್ತು ಸಮುದ್ರದಲ್ಲಿ ಶೋಧ ನಡೆಸಿದ್ದಾರೆ. ಅಪಹರಣ ಮತ್ತು ಮಾನವ ಕಳ್ಳಸಾಗಣೆಯಂತಹ ಸಾಧ್ಯತೆಗಳನ್ನು ಪರಿಶೀಲಿಸುವಂತೆ ನಾವು ಪೊಲೀಸರನ್ನು ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.