ಮೂಡುಬಿದಿರೆ: ಬಜರಂಗದಳದ ಮಾಜಿ ಸಂಚಾಲಕನ ಮನೆಯ ಹಟ್ಟಿಗೇ ನುಗ್ಗಿ ದನ-ಕರುಗಳನ್ನು ಕದ್ದೊಯ್ದ ಓರ್ವ ಗೋಕಳ್ಳನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಪುತ್ತಿಗೆ ನಿವಾಸಿ ಮೊಹಮ್ಮದ್ ಆರೀಫ್ (25) ಬಂಧಿತ ಆರೋಪಿ.
10 ದಿನಗಳ ಹಿಂದೆ ಮೂಡುಬಿದಿರೆ ತಾಲೂಕಿನ ಬಜರಂಗದಳದ ಮಾಜಿ ಸಂಚಾಲಕ ಬೆಳುವಾಯಿ ಗ್ರಾಮದ ಖಂಡಿಗ ದರ್ಖಾಸು ನಿವಾಸಿ ಸೋಮನಾಥ ಕೋಟ್ಯಾನ್‌ರವರ ಮನೆಯ ಹಟ್ಟಿಗೇ ನುಗ್ಗಿ ದನಗಳನ್ನು ಕಳವುಗೈಯಲಾಗಿತ್ತು. ನಾಯಿ ಬೊಗಳಿದ ಶಬ್ದಕ್ಕೆ ಮನೆಯವರು ಹೊರಗೆ ಬಂದು ನೋಡಿದಾಗ ಸಿಲ್ವರ್ ಬಣ್ಣದ ಕಾರೊಂದು ಮನೆಯ ಹಿಂಭಾಗ ನಿಂತಿತ್ತು. ಡ್ರೈವರ್ ಸೀಟ್ ನಲ್ಲಿ ಓರ್ವ ಕುಳಿತಿದ್ದು ಕಾರು ಸ್ಮಾರ್ಟ್‌ನಲ್ಲಿಯೇ ಇರಿಸಲಾಗಿತ್ತು. ಉಳಿದ ಇಬ್ಬರು ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನ ಮತ್ತು ಒಂದು ಕರುವನ್ನು ಕಾರಿಗೆ ತುಂಬಿಸಿಕೊಂಡು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಅವರ ಬೆನ್ನು ಬಿದ್ದಿದ್ದರು. ಇದೀಗ ಓರ್ವ ಆರೋಪಿ ಮೊಹಮ್ಮದ್ ಆಸಿಫ್‌ನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.