ಮಂಗಳೂರು: ಅಕ್ರಮ ಪಿಸ್ತೂಲ್ ಮಾರಾಟ ಜಾಲ ಪತ್ತೆ - ಐವರು ನಟೋರಿಯಸ್ ಕ್ರಿಮಿನಲ್‌ಗಳು ಸಿಸಿಬಿ ಬಲೆಗೆ
Thursday, March 13, 2025
ಮಂಗಳೂರು: ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ ಮಂಗಳೂರು ಸಿಸಿಬಿ ಪೊಲೀಸರು ಕೇರಳ ರಾಜ್ಯ ಮೂಲದ ಐವರು ನಟೋರಿಯಸ್ ಕ್ರಿಮಿನಲ್‌ಗಳನ್ನು ಬಂಧಿಸಿ, ಮೂರು ಪಿಸ್ತೂಲ್‌ಗಳು, ಆರು ಸಜೀವ ಮದ್ದುಗುಂಡುಗಳು ಮತ್ತು 12.895ಕೆಜಿ ಗಾಂಜಾ, ಮೂರು ಕಾರುಗಳು ಸೇರಿದಂತೆ ಹಲವಾರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯ ಬೀಮನಡಿ ಗ್ರಾಮದ ಕುನ್ನುಂಕೈ ವೆಸ್ಟ್ ನಿವಾಸಿ ನೌಫಲ್(38), ಪೈವಳಿಕೆ ಗ್ರಾಮದ ಕುರ್ಡಪದವು ಪೋಸ್ಟ್, ಸುಂಕದಕಟ್ಟೆ ನಿವಾಸಿ ಮನ್ಸೂರ್(36), ಬಂದ್ಯೋಡ್, ಶಿರಿಯಾ ಪೋಸ್ಟ್, ಮಂಗಲ್ಪಾಡಿ ಪಂಚಾಯತ್ ಬಳಿಯ ನಿವಾಸಿ ಅಬ್ದುಲ್ ಲತೀಫ್(29), ಕಾಸರಗೋಡು ಜಿಲ್ಲೆಯ ಕಡಂಬಾರ್, ಮೊರ್ತಾನ ನಿವಾಸಿಗಳಾದ ಮೊಹಮ್ಮದ್ ಅಸ್ಕರ್(27), ಮೊಹಮ್ಮದ್ ಸಾಲಿ(31) ಬಂಧಿತ ನಟೋರಿಯಸ್ ಕ್ರಿಮಿನಲ್‌ಗಳು.
ಮಾ.12ರಂದು ಮಂಗಳೂರಿನ ನಾಟೆಕಲ್‌ನಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ನೌಫಲ್ ಹಾಗೂ ಮನ್ಸೂರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಇವರಿಂದ 2ಪಿಸ್ತೂಲ್‌ಗಳು, 4ಸಜೀವ ಮದ್ದುಗುಂಡುಗಳು, 2ಮೊಬೈಲ್ ಫೋನುಗಳು, ಕಾರು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ 14.60ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರು ನೀಡಿದ ಮಾಹಿತಿಯಂತೆ ಅದೇ ದಿನ ಕೇರಳದಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ನಟೋರಿಯಸ್ ಕ್ರಿಮಿನಲ್ ಅಬ್ದುಲ್ ಲತೀಫ್‌ನನ್ನು ಸಿಸಿಬಿ ಪೊಲೀಸರು ಅರ್ಕುಳದಲ್ಲಿ ಬಂಧಿಸಿದ್ದಾರೆ. ಈತನಿಂದ 12.895ಕೆಜಿ ಗಾಂಜಾ ಸೇರಿದಂತೆ ಸ್ವಿಫ್ಟ್ ಕಾರು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 15.70ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿನ ನಟೋರಿಯಸ್‌ಗಳಿಗೆ ಮೂರು ಪಿಸ್ತೂಲ್‌ಗಳನ್ನು ಇದೇ ಅಬ್ದುಲ್ ಲತೀಫ್ ಮಾರಾಟ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿನ ಮಿಸ್‌ಫೈರಿಂಗ್ ಪ್ರಕರಣದ ಆರೋಪಿಗೆ ಈತನೇ ಪಿಸ್ತೂಲ್ ಮಾರಾಟ ಮಾಡಿದ್ದ. ಜೊತೆಗೆ 2024ರಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಲರ್‌ನಿಗೂ ಈತನೇ ಪಿಸ್ತೂಲ್ ಮಾರಾಟ ಮಾಡಿದ್ದನು. ಈತನ ವಿರುದ್ಧ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ, ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿರುತ್ತದೆ.
ಅಲ್ಲದೆ ಮಾ.13ರಂದು ತಲಪಾಡಿ ಪರಿಸರದಲ್ಲಿ ವೋಕ್ಸ್ ವ್ಯಾಗನ್ ಪೋಲೋ ಕಾರಿನಲ್ಲಿ ಆರೋಪಿಗಳಿಬ್ಬರು ಯಾವುದೋ ಕೃತ್ಯವೆಸಗಲು ಸಂಚು ರೂಪಿಸಿ ತಿರುಗಾಡಿಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ದೇವಿಪುರದ ಬಳಿ ಕಾರನ್ನು ಪತ್ತೆ ಹಚ್ಚಿ ಆರೋಪಿಗಳಾದ ಮೊಹಮ್ಮದ್ ಅಸ್ಕರ್, ಮೊಹಮ್ಮದ್ ಸಾಲಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಪಿಸ್ತೂಲ್, 2ಸಜೀವ ಮದ್ದುಗುಂಡುಗಳು, 2ಮೊಬೈಲ್ ಫೋನುಗಳು ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 10.20ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.