ಬೆಂಗಳೂರು: ಪತಿಗೆ ಬುದ್ಧಿ ಕಲಿಸಲೆಂದು ವಿಪರೀತದ ನಿರ್ಧಾರ ತೆಗೆದುಕೊಂಡ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೋಡಿಗೆಹಳ್ಳಿ ಗೇಟ್ ಬಳಿ ತುಮಕೂರು ಮೂಲದ ಸುರೇಶ್ ಹಾಗೂ ಬೆಂಗಳೂರಿನ ಮತ್ತಿಕೆರೆ ಮೂಲದ ಕುಸುಮಾ ದಂಪತಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದರು. ಸುರೇಶ್ ವೈಟ್‌ಫೀಲ್ಡ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸುರೇಶ್ ತಾಯಿ ಮೃತಪಟ್ಟ ಮರುದಿನವೇ ಪತ್ನಿ ಕುಸುಮಾ (25) ತನ್ನ ಇಬ್ಬರು ಮಕ್ಕಳಾದ ಶ್ರೀಯಾನ್ (6) ಹಾಗೂ ಮಗಳು ಚಾರ್ವಿ (1)ಯನ್ನ ಉಸಿರುಗಟ್ಟಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸುರೇಶ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ದರಿಂದ ಸುರೇಶ್ ಅವರ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದ್ದಾನೆ. ಇದರಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುಸುಮಾ ತನ್ನನ್ನು ಪತಿ ಕಡೆಗಣಿಸಿದ್ದಾನೆ ಎಂದು ಅಸಮಾಧಾನಕ್ಕೆ ಒಳಗಾಗಿದ್ದಾಳೆ.
ಆದ್ದರಿಂದ ಪತಿಗೆ ಕುಸುಮಾ ಬುದ್ಧಿ ಕಲಿಸಲು ಈ ವಿಪರೀತದ ನಿರ್ಧಾರಕ್ಕೆ ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದು, ಮೃತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಸಮಾ ಬರೆದಿಟ್ಟ ಡೆತ್ ನೋಟ್‌ನಲ್ಲಿ 'Congrats your ego wins' ಎಂದು ಉಲ್ಲೇಖ ಮಾಡಿದ್ದಾಳೆ. ಅಂದರೆ, 'ಪತಿಗೆ ನಿನ್ನ ಇಗೋ ಗೆದ್ದಿದೆ ಎಂದು ಹೇಳಿದ್ದಾಳೆ. ಜೊತೆಗೆ, ಪತಿಗೆ ಬುದ್ಧಿ ಕಲಿಸಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅತ್ತೆ ಸತ್ತ ದಿನವೇ ಮಕ್ಕಳನ್ನು ಸಾಯಿಸಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ' ಎಂದು ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ.