ಬೆಳ್ತಂಗಡಿ: ಸಾಂತಾಕ್ಲಾಸ್‌ ಸ್ವಾಗತಕ್ಕೆ ಮನೆಗೆ ಲೈಟಿಂಗ್ ಮಾಡುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ವಿದ್ಯುತ್ ಆಘಾತಕ್ಕೆ ಬಲಿ


ಬೆಳ್ತಂಗಡಿ: ಸಾಂತಾಕ್ಲಾಸ್‌ನನ್ನು ಮನೆಗೆ ಸ್ವಾಗತಿಸಲು ಲೈಟಿಂಗ್ ಮಾಡುತ್ತಿದ್ದ ಒಂಬತ್ತನೇ ವಿದ್ಯಾರ್ಥಿಯೊಬ್ಬ ವಿದ್ಯುತ್ ಆಘಾತದಿಂದ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪೆರೊಡಿತ್ತಾಯನ ಕಟ್ಟೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ತೆಂಕಕಾರಂದೂರು ಪೆರೋಡಿತ್ತಾಯನಕಟ್ಟೆ ಶಾಲೆಯ ಬಳಿಯ ನಿವಾಸಿ ಸ್ಟೀಫನ್ (14) ಮೃತಪಟ್ಟ ಬಾಲಕ.

ಸ್ಟೀಫನ್ ಬೆಳ್ತಂಗಡಿ ಸಂತ ತೆರೇಸಾ ಶಾಲೆಯ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸ್ಟೀಫನ್ ಮನೆಗೆ ಸಾಂತಕ್ಲಾಸ್ ಆಗಮನವಿತ್ತು. ಸಾಂತಾಕ್ಲಾಸ್ ಅನ್ನು ಸ್ವಾಗತಿಸಲು ಆತ ಶಾಲೆಗೆ ರಜೆ ಮಾಡಿ ಮನೆಗೆ ಲೈಟಿಂಗ್ ಮಾಡುತ್ತಿದ್ದ‌. ಈ ವೇಳೆ ಸ್ಟೀಫನ್‌ಗೆ ವಿದ್ಯುತ್ ಆಘಾತವಾಗಿದೆ. ಅವಘಡ ಸಂಭವಿಸಿದ ತಕ್ಷಣ ಆತನ ಅಜ್ಜಿ ಹಾಗೂ ದೊಡ್ಡಪ್ಪ ಸ್ಥಳೀಯ ಆಸ್ಪತ್ರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟರಲ್ಲಾಗಲೇ ಸ್ಟೀಫನ್ ಪ್ರಾಣಪಕ್ಷಿ ಹಾರಿಹೋಗಿತ್ತು.

ಸ್ಟೀಫನ್ ಹೆತ್ತವರು ಎರಡು ವರ್ಷಗಳ ಹಿಂದೆ ಮೃತ ಪಟ್ಟಿದ್ದರು. ಈತನಿಗೊಬ್ಬ ಸಹೋದರನಿದ್ದು, ಆತ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಸ್ಥಳಕ್ಕೆ ವೇಣೂರು ಠಾಣಾಧಿಕಾರಿ ಶೈಲಾ, ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತ ಕ್ಲೇಮೆಂಟ್ ಬ್ರಗ್ಸ್ ಭೇಟಿ ನೀಡಿದ್ದಾರೆ.