ಪುತ್ತೂರು: ಬೈಕ್ ಢಿಕ್ಕಿ ಮಹಿಳೆ ಮೃತ್ಯು ಪ್ರಕರಣ- ಸವಾರನಿಗೆ ದಂಡ, ಬೈಕ್ ಮಾಲಕನಿಗೆ ಕಾರಾಗೃಹ ಶಿಕ್ಷೆ



ಪುತ್ತೂರು: ಇಲ್ಲಿನ ನೆಟ್ಟಣಿಗೆ ಮುಡೂರು ಗ್ರಾಮದ ಕೊಟ್ಯಾಡಿ ಎಂಬಲ್ಲಿ ಎರಡೂವರೆ ವರ್ಷಗಳ ಹಿಂದೆ ಬೈಕ್ ಅಪಘಾತವಾಗಿ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನ್ಯಾಯಾಲಯವು ಚಾಲನಾ ಪರವಾನಗಿ ಇಲ್ಲದೆ ಬೈಕ್ ಚಲಾಯಿಸಿದ್ದ ಆರೋಪಿ ಬೈಕ್‌ ಸವಾರನಿಗೆ ದಂಡ ವಿಧಿಸಿದ್ದಲ್ಲದೆ, ಬೈಕ್ ಮಾಲಕನಿಗೆ 2 ವರ್ಷ ಜೈಲು ಹಾಗೂ ದಂಡ ವಿಧಿಸಿ ಆದೇಶಿಸಿದೆ.

2022ರ ಫೆ.27ರಂದು ಕೇರಳದ ಮುಳಿಯೂರು ನಿವಾಸಿ ಶಾಹಿದ್ ಎಂಬಾತ ಕೇರಳ ನೋಂದಣಿಯ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈತನ ಬೈಕ್ ನೆಟ್ಟಣಿಗೆ ಮುಡೂರು ಗ್ರಾಮದ ಕೊಟ್ಯಾಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಕೊಟ್ಯಾಡಿಯ ದುಗ್ಗಮ್ಮ(55) ಎಂಬುವರಿಗೆ ಢಿಕ್ಕಿಯಾಗಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದುಗ್ಗಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಬೈಕ್‌ ಹಿಂಬದಿ ಸವಾರೆ ನೆಬಿಸಾ ಗಾಯಗೊಂಡಿದ್ದರು.

ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಬೈಕ್‌ ಸವಾರ ಶಾಹಿದ್ ಚಾಲನಾ ಪರವಾನಗಿ ಹೊಂದಿಲ್ಲ ಎಂಬುದು ತಿಳಿದು ಬಂದಿತ್ತು. ಈ ಸಂಬಂಧ ಬೈಕ್‌ ಮಾಲಕ ಮುಳಿಯಾರು ನಿವಾಸಿ ಮಹಮ್ಮದ್ ಶಾಕೀರ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆರೋಪಿಗಳಿಬ್ಬರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣದ ಕುರಿತು ವಿಚಾರಣೆ ನಡೆಸಿದ ಪುತ್ತೂರಿನ ಹೆಚ್ಚುವರಿ ನ್ಯಾಯಾಲಯದ ಹಿರಿಯ ವ್ಯಾವಹಾರಿಕ ನ್ಯಾಯಾಧೀಶ ದೇವರಾಜ್ ವೈ.ಎಚ್‌. ಅವರು, ಬೈಕ್‌ ಸವಾರ ಶಾಹಿದ್‌ಗೆ 5 ಸಾವಿರ ರೂ. ದಂಡ, ಬೈಕ್‌ ಮಾಲಕ ಮಹಮ್ಮದ್ ಶಾಕೀರ್‌ಗೆ 2 ವರ್ಷ ಜೈಲು, 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ವಾದಿಸಿದ್ದರು.