ಪ್ರೀತಿಯ ಬೆಕ್ಕಿಗೆ ಹೇರ್‌ಕಟ್ ಮಾಡಿಸಲು 1.5 ಲಕ್ಷ ರೂ‌. ಖರ್ಚು ಮಾಡಿದ ಪಾಕಿಸ್ತಾನಿ ಮಾಜಿ ಕ್ರಿಕೆಟಿಗ



ಹೇರ್‌ಕಟ್ ಮಾಡುವುದಕ್ಕೆ ಹೆಚ್ಚೆಂದರೆ ಎಷ್ಟು ಖರ್ಚು ಮಾಡಬಹುದು. 1 ಸಾವಿರ, 2 ಸಾವಿರ.. ಖರ್ಚು ಮಾಡಬಹುದು. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್‌ ಹೇರ್‌ಕಟ್‌ಗಾಗಿ ಬರೋಬ್ಬರಿ 1.5 ಲಕ್ಷ ಪಾಕಿಸ್ತಾನಿ ರೂ. ಖರ್ಚು ಮಾಡಿದ್ದಾರೆ. ಹಾಗೆಂದು ಇದು ವಾಸಿಂ ಅಕ್ರಮ್ ಮಾಡಿಕೊಂಡಿರುವ ಹೇರ್‌ಕಟ್‌ ಅಲ್ಲ. ಬದಲಾಗಿ ಅವರು ತಮ್ಮ ಪ್ರೀತಿಯ ಬೆಕ್ಕಿನ ಹೇರ್‌ಕಟ್‌ಗಾಗಿ ವಾಸಿಂ ಅಕ್ರಂ ಇಷ್ಟು ಹಣ ಖರ್ಚು ಮಾಡಿದ್ದಾರೆ. 

ಸದ್ಯ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್‌ ವಿಶ್ಲೇಷಣೆಯಲ್ಲಿರುವ ವಾಸಿಂ ಅಕ್ರಂ 822 ಆಸ್ಟ್ರೇಲಿಯನ್‌ ಡಾಲರ್‌ (ಭಾರತೀಯ ರೂಪಾಯಿಯಲ್ಲಿ 45 ಸಾವಿರ ರೂಪಾಯಿ) ಖರ್ಚು ಮಾಡಿ ತಮ್ಮ ಪ್ರೀತಿಯ ಬೆಕ್ಕಿನ ಹೇರ್‌ ಕಟ್‌ ಮಾಡಿಸಿದ್ದಾರೆ. ಇದರ ಫೋಟೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಕ್ರಿಕೆಟ್‌ ವಿಶ್ಲೇಷಣೆ ಮಾಡುತ್ತಿದ್ದ ವೇಳೆ ಸ್ವತಃ ವಾಸಿಂ ಅಕ್ರಂ ಈ ವಿಚಾರ ಬಹಿರಂಗಪಡಿಸಿದ್ದಾರೆ.

ಈ ವೇಳೆ ವಾಸಿಂ ಅಕ್ರಮ್‌ ಪಕ್ಕದಲ್ಲಿ ಕುಳಿತಿರಿವ ಆಸೀಸ್‌ ಮೂಲದ ವಿಶ್ಲೇಷಕರು ಕೂಡ ಬೆಕ್ಕಿನ ಹೇರ್‌ಕಟ್‌ಗಾಗಿ ಇಷ್ಟೊಂದು ಪ್ರಮಾಣದಲ್ಲಿ ಹಣ ಖರ್ಚು ಮಾಡಿದ್ದಿರೇ ಎಂದು ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೇರ್‌ಕಟ್‌ನ ಬಿಲ್‌ಅನ್ನು ಹಂಚಿಕೊಳ್ಳುವ ಮೊದಲ ಕಾಮೆಂಟರಿಯಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದರು.

ನಾನು ನಿನ್ನೆಯಷ್ಟೇ ನನ್ನ ಬೆಕ್ಕಿನ ಹೇರ್‌ಕಟ್‌ ಮಾಡಿಸಿದೆ. ಅದಕ್ಕಾಗಿ ಸರಿಸುಮಾರು 1 ಸಾವಿರ ಡಾಲರ್‌ ಖರ್ಚು ಮಾಡಿದೆ. ಅವರು ಬೆಕ್ಕಿಗೆ ಬೇಕಾದೆಲ್ಲವನ್ನೂ ಮಾಡಿದರು. ಬೆಕ್ಕಿಗೆ ಊಟ ಹಾಕಿಸಿದರು, ಚೆನ್ನಾಗಿ ನೋಡಿಕೊಂಡರು. ಕೊನೆಗೆ ಬಿಲ್‌ ಕೊಟ್ಟರು. ಈ ವೇಳೆ ನಾನು ಈ ಹಣದಲ್ಲಿ ನಾನು ಪಾಕಿಸ್ತಾನದಲ್ಲಿ 200 ಬೆಕ್ಕುಗಳನ್ನು ಖರೀದಿ ಮಾಡುತ್ತಿದ್ದೆ' ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.


ಆದರೆ ಬೆಕ್ಕಿನ ಹೇರ್‌ಕಟ್‌ಗಾಗಿ ಮಾತ್ರವೇ ಇಷ್ಟೊಂದು ಹಣವಲ್ಲ. ಇದರಲ್ಲಿ 40ಆಸ್ಟ್ರೇಲಿಯನ್‌ ಡಾಲರ್‌ ಮೊತ್ತ ಮಾತ್ರ ಬೆಕ್ಕಿನ ಹೇರ್‌ಕಟ್‌ ಬೆಲೆ. 100 ಆಸ್ಟ್ರೇಲಿಯನ್‌ ಡಾಲರ್‌ಅನ್ನು ಮೆಡಿಕಲ್‌ ಚೆಕಪ್‌, 305 ಆಸ್ಟ್ರೇಲಿಯನ್‌ ಡಾಲರ್‌ನ ಅನಸ್ತೇಷಿಯಾ, 120 ಡಾಲರ್‌ನ ಪೂರ್ವ ಪ್ರಕ್ರಿಯೆಗಳು ಹಾಗೂ 251 ಡಾಲರ್‌ನ ಕಾರ್ಡಿಯೋ ಟೆಸ್ಟ್‌ ಎಂದು ಚಾರ್ಜ್‌ ಮಾಡಲಾಗಿದೆ. 822 ಆಸ್ಟ್ರೇಲಿಯನ್‌ ಡಾಲರ್‌ ಎಂದರೆ, ಭಾರತೀಯ ರೂಪಾಯಿಯಲ್ಲಿ 45 ಸಾವಿರವಾಗಿದ್ದರೆ, ಪಾಕಿಸ್ತಾನಿ ರೂಪಾಯಿಯಲ್ಲಿ 1.5 ಲಕ್ಷ ರೂಪಾಯಿ ಆಗಿದೆ.