ಅಪಹರಣಕಾರನನ್ನು ಬಿಟ್ಟು ಹೆತ್ತವರೊಂದಿಗೆ ಹೋಗಲೊಲ್ಲೆ ಎಂದು ಅತ್ತು ಗೋಳಾಡಿದ ಮಗು
Sunday, September 1, 2024
ರಾಜಸ್ಥಾನ: ಸಾಮಾನ್ಯ ಯಾವುದೇ ಮಕ್ಕಳು ಹೆತ್ತವರನ್ನು ತೊರೆದು ಬೇರೆಯವರೊಂದಿಗೆ ಹೋಗಲು ಅಳುತ್ತಾರೆ, ಹಠ ಮಾಡುತ್ತಾರೆ. ಆದರೆ ಇಲ್ಲೊಂದು ಎರಡು ವರ್ಷದ ಮಗು ತನ್ನನ್ನು ಅಪಹರಣ ಮಾಡಿರುವಾತನನ್ನೇ ಬಿಟ್ಟಿರಲಾರದೆ ಎಂದು ಕಣ್ಣೀರು ಹಾಕಿರುವ ಪ್ರಸಂಗ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದಲ್ಲಿ 14 ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಮಗುವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಗ ಪೊಲೀಸರು ಮಗುವನ್ನು ಹೆತ್ತವರಿಗೆ ಒಪ್ಪಿಸಿದರೆ, ಮಗು ಮಾತ್ರ ಬಿಡಲೊಲ್ಲೆ ಎಂದು ಅಪಹರಣಕಾರನನ್ನೇ ಅಪ್ಪಿಕೊಂಡು ಜೋರಾಗಿ ಅಳತೊಡಗಿದೆ. ಮಗು ಅಳುತ್ತಿರುವುದನ್ನು ಅಪಹರಣಕಾರನ ಕಣ್ಣಲ್ಲೂ ನೀರು ತುಂಬಿದೆ.
ಉತ್ತರಪ್ರದೇಶದ ತನುಜ್ ಚಹರ್ ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಆತನನ್ನು ಅಮಾನತುಗೊಳಿಸಿದ್ದರು.
ಅಪಹರಣಕಾರ, ಮಗು ಪೃಥ್ವಿಯ ತಾಯಿ ಪೂನಂ ಚೌಧರಿಯನ್ನು ತನ್ನೊಂದಿಗೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ನಿರಾಕರಿಸಿದ್ದಾಳೆ. ಇದೇ ಕೋಪದಲ್ಲಿ ಪೂನಂನ 8ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿದ್ದನು. ಮಗುವಿನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೇರೆಬೇರೆ ಕಡೆ ತೆರಳಿದ್ದಾನೆ. ಯಾರೂ ಗುರುತಿಸದಂತೆ ಗಡ್ಡ ಬೆಳೆಸಿ ಗೆಟಪ್ ಚೇಂಜ್ ಮಾಡುತ್ತಿದ್ದ. ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ತನುಜ್ ಚಹರ್ ಬೆದರಿಕೆ ಹಾಕಿದ್ದಾನೆ. ಕೊನೆಗೂ 14 ತಿಂಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಅಲಿಗಢ ಪ್ರದೇಶದಲ್ಲಿ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ.
ದಿನ ಕಳೆದಂತೆ ಕಿಡ್ನಾಪರ್ ಹಾಗೂ ಮಗುವಿನ ನಡುವೆ ಒಲವು ಬೆಳೆದಿದೆ. ಆದ್ದರಿಂದಲೇ ಅಪಹರಣಕಾರನನ್ನು ಬಿಟ್ಟು ತಂದೆ- ತಾಯಿಯರ ಬಳಿ ಹೋಗುವುದಿಲ್ಲ ಎಂದು ಮಗು ಅಳಲು ತೋಡಿಕೊಂಡಿದೆ. ನೋವಿನಿಂದ ಮಗುವನ್ನು ಒಪ್ಪಿಸಲು ಮುಂದಾದಾಗ ಅಪಹರಣಕಾರನ ಕಣ್ಣಲ್ಲೂ ನೀರು ತುಂಬಿತ್ತು. ಒಂದೆಡೆ ಬಾಲಕ ಅಳುತ್ತಿದ್ದರೂ ಬಲವಂತವಾಗಿ ಅಪಹರಣಕಾರನಿಂದ ಬಿಡುಗಡೆಗೊಳಿಸಿ ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ.