ಮಂಗಳೂರು: 'ಕೌನ್ ಬನೇಗಾ ಕರೋಡ್‌ಪತಿ'ಯಲ್ಲಿ ಕುಡ್ಲದ ಬಾಲೆ ಅಪೂರ್ವ ಶೆಟ್ಟಿ
Saturday, September 28, 2024
ಮಂಗಳೂರು: ಸೋನಿಟಿವಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಮಂಗಳೂರಿನ ಕಂಕನಾಡಿ ಪಂಪ್‌ವೆಲ್ ನಿವಾಸಿ ಅಪೂರ್ವ ಶೆಟ್ಟಿ ಕುಳಿತು ಮಿಂಚು ಹರಿಸಿದ್ದಾರೆ.
ಸೆ. 27ರಂದು ರಾತ್ರಿ 9ಗಂಟೆಗೆ ಅಪೂರ್ವ ಶೆಟ್ಟಿ ಕಾರ್ಯಕ್ರಮ ಪ್ರಸಾರಗೊಂಡಿದೆ. ಇವರು 11ಪ್ರಶ್ನೆಗಳಿಗೆ ಉತ್ತರ ನೀಡಿ 6.40ಲಕ್ಷ ಗಳಿಸಿದ್ದಾರೆ. 12ನೇ ಪ್ರಶ್ನೆಗೆ ಮ್ಯಾನ್‌ಗ್ರೋವ್ ಕಾಡು(ಕಾಂಡ್ಲಾ ವನ) ಹೆಚ್ಚು ಇರುವ ದೇಶ ಯಾವುದೆಂದು ಅಮಿತಾಭ್ ಬಚ್ಚನ್ ಪ್ರಶ್ನೆ ಕೇಳಿದ್ದಾರೆ. ನಾಲ್ಕು ಆಯ್ಕೆಗಳಲ್ಲಿ ಬ್ರೆಜಿಲ್, ನೈಜೀರಿಯಾ, ಬಾಂಗ್ಲಾದೇಶ ಹಾಗೂ ಇಂಡೋನೇಶಿಯಾ ದೇಶಗಳ ಹೆಸರಿತ್ತು. ಸರಿಯಾದ ಉತ್ತರ ಯಾವುದೆಂದು ಗೊತ್ತಾಗದೆ ತಮ್ಮ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಅವರೊಂದಿಗೆ ತಮ್ಮ ಮಾತೃಭಾಷೆ ತುಳುವಿನಲ್ಲಿಯೇ ಮಾತನಾಡಿದ್ದಾರೆ. ಅವರು ನೈಜೀರಿಯಾ ಇರಬಹುದೆಂಬ ಸಂಶಯದ ಉತ್ತರ ನೀಡಿದ್ದಾರೆ.
ಆದರೆ ಅಪೂರ್ವ ಅವರಿಗೆ ನೈಜೀರಿಯಾ ಎಂಬ ಉತ್ತರದ ಬಗ್ಗೆ ಸಂಶಯವಿತ್ತು. ಅದಾಗಲೇ ಆಡಿಯನ್ಸ್ ಮತ್ತು 50-50 ತೆಗೆದುಕೊಂಡಿದ್ದರು. ಬೇರೆ ಅವಕಾಶಗಳು ಇರಲಿಲ್ಲ. ನೈಜೀರಿಯಾ ಆಫ್ರಿಕಾ ದೇಶದಲ್ಲಿರುರುವ ಪ್ರದೇಶ. ಮ್ಯಾಂಗ್ರೋವ್ ಕಾಡು ನದಿ, ಸಮುದ್ರದ ಬದಿಗಳಲ್ಲಿ ಬೆಳೆಯುವ ಕುರುಚಲು ಪೊದೆಯಂತಹ ಮರ. ಆದ್ದರಿಂದ ಅವರಿಗೆ ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ಉತ್ತರದ ಬಗ್ಗೆ ಖಚಿತತೆ ಇಲ್ಲದೆ ಗೊಂದಲಕ್ಕೀಡಾಗಿದ್ದಾರೆ. ಒಂದುವೇಳೆ ಉತ್ತರ ಹೇಳಿ ತಪ್ಪಾದಲ್ಲಿ 6.40ಲಕ್ಷದಲ್ಲಿ ಅರ್ಧ ಹಣ ಕಡಿತಗೊಳ್ಳುತ್ತಿತ್ತು. ಆದ್ದರಿಂದ ಅವರು ಸ್ಪರ್ಧೆಯಿಂದ ಕ್ವಿಟ್ ಆಗಿದ್ದಾರೆ. ಈ ಪ್ರಶ್ನೆಯ ಉತ್ತರ ಇಂಡೋನೇಷ್ಯಾ ಆಗಿತ್ತು. ಅಪೂರ್ವ ಶೆಟ್ಟಿಯವರು ಅಮಿತಾಭ್ ಬಚ್ಚನ್‌ರಲ್ಲಿ ಮಾತನಾಡುತ್ತಾ ತಮ್ಮ ತಂದೆ ಉದ್ಯಮಿ ಲೋಕನಾಥ ಶೆಟ್ಟಿಯವರು ನಿಮ್ಮ ಅಭಿಮಾನಿ ಎಂದು ಹೇಳಿದ್ದಾರೆ. ಆದ್ದರಿಂದ ಕಾರ್ಯಕ್ರಮದ ಮಧ್ಯೆಯೇ ಅಮಿತಾಭ್ ಅಪೂರ್ವ ತಂದೆಯೊಂದಿಗೆ ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ.