ಕಾಸರಗೋಡು: ರೈಲು ಡಿಕ್ಕಿಯಾಗಿ ಮೂವರು ಮಹಿಳೆಯರು ಮೃತ್ಯು


ಕಾಸರಗೋಡು: ರೈಲು ಹಳಿಯನ್ನು ದಾಟುತ್ತಿದ್ದ ಸಂದರ್ಭ ರೈಲು ಢಿಕ್ಕಿ ಹೊಡೆದು ಮೂವರು ಮಹಿಳೆಯರು ಮೃತಪಟ್ಟ ಘಟನೆ ಮಂಗಳೂರಿನ ಗಡಿಭಾಗವಾದ ಕಾಸರಗೋಡು ಜಿಲ್ಲೆಯ ಕಾಞಂಗಾಂಡ್‌ನಲ್ಲಿ‌ ನಡೆದಿದೆ.

ಕೋಟ್ಟಯಂ ಚಿಙವನಂ ನಿವಾಸಿಗಳಾದ ಆಲೀಸ್ ಥೋಮಸ್ (63), ಚಿನ್ನಮ್ಮ (68) ಮತ್ತು ಏಂಜೆಲ್ (30) ರೈಲು ಬಡಿದು ಮೃತಪಟ್ಟ ಮಹಿಳೆಯರು.

ಇವರು ಕಾಞಂಗಾಡ್‌ನ ಕಳ್ಳಾರ್‌ನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿವಾಹ ಕಾರ್ಯಕ್ರಮದ ಬಳಿಕ ತಮ್ಮ ಊರು ಕೋಟಯಂಗೆ ಹಿಂದಿರುಗಲು ಕಾಞಂಗಾಡ್ ರೈಲು ನಿಲ್ದಾಣಕ್ಕೆ ತೆರಳಲು ರೈಲು ಹಳಿ ದಾಟಿ ಬರುತ್ತಿದ್ದ ವೇಳೆ ಕಣ್ಣೂರಿನಿಂದ ಮಂಗಳೂರು ಮಾರ್ಗವಾಗಿ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಈ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.