2ಲಕ್ಷ ನೀಡಿ ಐಪಿಎಸ್ ಕೆಲಸ ಗಿಟ್ಟಿಸಿದ 18ರ ಯುವಕ - ಇದರ ಬೆನ್ನಲ್ಲೇ ಆತನಿಗೆ ಕಾದಿತ್ತು ಬಿಗ್ ಶಾಕ್


ಪಟನಾ: ಬಿಹಾರದ ಜಮುಯಿ ನಗರದಲ್ಲಿ ವಂಚಕರ ಜಾಲವೊಂದು ಐಪಿಎಸ್ ಅಧಿಕಾರಿಯನ್ನಾಗಿ ಮಾಡುವುದಾಗಿ ನಂಬಿಸಿ 2 ಲಕ್ಷ ಪಡೆದು ಯುವಕನೊಬ್ಬನಿಗೆ ಮೋಸ ಮಾಡಿದ್ದಾರೆ. ನಕಲಿ ಐಪಿಎಸ್ ಅಧಿಕಾರಿಯನ್ನು ಜಮುಯಿ ಸಬ್ಇನ್ಸ್‌ಪೆಕ್ಟರ್ ಬಂಧಿಸಿದ್ದು, ವಿಚಾರಣೆ ವೇಳೆ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಇಡೀ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಮನೋಜ್ ಸಿಂಗ್ ಎಂಬ ವಂಚಕ 18ವರ್ಷದ ಯುವಕ ಮಿಥಿಲೇಶ್ ಮಾಂಝಿ ಎಂಬಾತನನ್ನು ಐಪಿಎಸ್ ಅಧಿಕಾರಿ ಮಾಡುವುದಾಗಿ ಪುಸಲಾಯಿಸಿ 2 ಲಕ್ಷ ರೂ. ಹಣ ಪಡೆದು, ನಕಲಿ ಪಿಸ್ತೂಲ್ ಮತ್ತು ಯೂನಿಫಾರ್ಮ್ ನೀಡಿ ವಂಚನೆ ಮಾಡಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ‌.

ಬಂಧಿತ ಯುವಕ ಮಿಥಿಲೇಶ್‌ನಿಂದ ಪಲ್ಸ‌ರ್ ಬೈಕ್, ಪಿಸ್ತೂಲ್ ಹಾಗೂ ಯೂನಿಫಾರ್ಮ್ ವಶಕ್ಕೆ ಪಡೆಯಲಾಗಿದೆ. ಈ ವಂಚನೆ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ.

ಬಂಧಿತ ಮಿಥಿಲೇಶ್ ತನಿಖೆಯ ವೇಳೆ, ತಾನು ಇತ್ತೀಚೆಗೆ ಜಲಪಾತ ವೀಕ್ಷಿಸಲು ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿ ಒಬ್ಬರನ್ನು ಭೇಟಿಯಾದೆ. ಆತನ ಮಾತುಗಳನ್ನು ಕೇಳಿ ಮರುಳಾದೆ. ಕಡಿಮೆ ಹಣದಲ್ಲಿ ಐಪಿಎಸ್ ಅಧಿಕಾರಿಯನ್ನಾಗಿ ಮಾಡುತ್ತೇನೆ ಎಂದು ನಂಬಿಸಿದರು. ಅವರ ಮಾತನ್ನು ನಿಜವೆಂದು ನಂಬಿದೆ ಮತ್ತು ಒಳಗೊಳಗೆ ಖುಷಿಪಡುತ್ತಿದೆ. ನನಗೆ ಎಲ್ಲರೂ ಗೊತ್ತಿದೆ ಮತ್ತು ಸುಲಭವಾಗಿ ಕೆಲಸ ಕೊಡಿಸುತ್ತೇನೆಂದು ನಂಬಿಸಿದರು. ಅದಕ್ಕಾಗಿ ಎರಡು ದಿನದಲ್ಲಿ 2 ಲಕ್ಷ ರೂ. ಹಣ ಹೊಂದಿಸುವಂತೆ ಹೇಳಿದರು. ಇದಾದ ಬಳಿಕ ನಾನು ಸಂಬಂಧಿಕರ ಬಳಿ ಒತ್ತಾಯ ಮಾಡಿ ಎರಡು ಲಕ್ಷ ಸಾಲ ರೂ. ಪಡೆದು ವಂಚಕನಿಗೆ ನೀಡಿದೆ. ಇದಾದ ಬಳಿಕ ವಂಚಕರು ಸಮವಸ್ತ್ರದ ಜತೆಗೆ ನಕಲಿ ಪಿಸ್ತೂಲ್ ನೀಡಿದರು ಎಂದು ಮಿಥಿಲೇಶ್ ಹೇಳಿದ್ದಾನೆ.

ಅಂದಹಾಗೆ ಬಂಧಿತ ಮಿಥೀಲೇಶ್ ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ತನ್ನ ಗ್ರಾಮದಲ್ಲಿ ಬಡಾಯಿ ಕೊಚ್ಚಿಕೊಳ್ಳುವಾಗ ಅಲ್ಲಿನ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಿಥಿಲೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ. ಈ ಮಿಥಿಲೇಶ್ ಸಮೋಸಾ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ನಕಲಿ ಅಧಿಕಾರಿ ಮಿಥಿಲೇಶ್‌ನನ್ನು ಪೊಲೀಸ್‌ ಠಾಣೆಗೆ ಸ್ವಾಗತಿಸುತ್ತಿರುವ ದೃಶ್ಯವಿದೆ. ಪೇದೆಯೊಬ್ಬರು ತಮಾಷೆಯಾಗಿ "ಬನ್ನಿ ಸರ್, ಐಪಿಎಸ್... ಸಿಖಂದ‌ರ್ ಪೊಲೀಸ್‌ ಠಾಣೆಗೆ" ಎಂದು ವ್ಯಂಗ್ಯವಾಡಿದ್ದಾರೆ.