ಬೆಂಗಳೂರು: ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) 2017ರ ನಿಯಮದ ತಿದ್ದುಪಡಿ, ಶಿಕ್ಷಕರ ಬಡ್ತಿ ಹಾಗೂ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹವಾಗಿ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
'1ರಿಂದ 5ನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಪದವೀಧರರಾಗಿದ್ದಲ್ಲಿ ಅವರನ್ನು 6 ಮತ್ತು 8ನೆ ತರಗತಿವರೆಗೆ ಪಾಠ ಮಾಡಲು ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಬೇಕು. ಇದಕ್ಕೆ ಅಡ್ಡಿಯಾಗಿರುವ ಸಿ ಆ್ಯಂಡ್ ಆರ್ ನಿಯಮ 2017ಕ್ಕೆ ತಿದ್ದುಪಡಿ ಮಾಡಬೇಕು. ಸೇವಾ ಜೇಷ್ಠತೆ, ಮುಂಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು' ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ್ ಆಗ್ರಹಿಸಿದರು.