ಬಳ್ಳಾರಿ ಜೈಲಿಗೆ ನಟ ದರ್ಶನ್​ ಶಿಫ್ಟ್!: ಹೈ-ಸೆಕ್ಯೂರಿಟಿ ಸೆಲ್​ಗೆ ಸ್ಥಳಾಂತರ | DARSHAN


ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವ​ರನ್ನು ಇಂದು ( ಗುರುವಾರ) ಬೆಳಗ್ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇದುವರೆಗೆ ದರ್ಶನ್​ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಅವರನ್ನು ಇಂದು ಬಿಗಿ ಭದ್ರತೆಯಲ್ಲಿ ಬಳ್ಳಾರಿಯ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.


ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾತಸಂದ್ರ ಟೋಲ್ ದಾಟಿ, ಶಿರಾದ ಮೂಲಕ ಬೆಂಗಳೂರಿನ ಪೊಲೀಸರ ಭದ್ರತೆಯೊಂದಿಗೆ ಟಿಟಿ ವಾಹನದಲ್ಲಿ ದರ್ಶನ್ ಅವರನ್ನು ಕರೆತರಲಾಯಿತು. ದರ್ಶನ್ ಕಾಣದಂತೆ ವಾಹನದ ಕಿಟಕಿಗೆ ಬಟ್ಟೆಯನ್ನು ಮುಚ್ಚಲಾಗಿತ್ತು.ಬೆಳಗ್ಗಿನ ಜಾವ 4.30ಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರಟ ಪೊಲೀಸ್​ ವಾಹನ ಬೆಳಗ್ಗೆ ‌9.45ರ ಸುಮಾರಿಗೆ ಬಳ್ಳಾರಿ ಸೆಂಟ್ರಲ್ ಜೈಲು ತಲುಪಿದೆ. 

ಪೂಮಾ ಕಂಪನಿಯ ಬ್ಲ್ಯಾಕ್ ಟಿ-ಶರ್ಟ್​ ಜೀನ್ಸ್ ಧರಿಸಿದ್ದ ದರ್ಶನ್ ಬಲಗೈಯಲ್ಲಿ ಬ್ಯಾಂಡೇಜ್ ಕಟ್ಟಿಕೊಂಡಿದ್ದು ಗಮನಕ್ಕೆ ಬಂತು. ಪೊಲೀಸ್​ ವಾಹನದಿಂದ ಇಳಿದ ದರ್ಶನ್  ಮೊದಲಿಗೆ ಜೈಲು ಪ್ರವೇಶದ್ವಾರದ ಎಂಟ್ರಿ ಪುಸ್ತಕದಲ್ಲಿ ಸಹಿ‌ ಮಾಡಿದರು. ಆಂತರಿಕ ಭದ್ರತಾ ವಿಭಾಗದಲ್ಲಿ ತಪಾಸಣೆ, ನಂತರ ಜೈಲು ವೈದ್ಯಾಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದರು.

ಬಳಿಕ ದರ್ಶನ್ ಅವರನ್ನು ಹೈ-ಸೆಕ್ಯೂರಿಟಿ ಸೆಲ್​ಗೆ ಕಳುಹಿಸಲಾಯಿತು‌. ಯಾರೊಬ್ಬರೂ ಎಂಟ್ರಿಯಾಗದಂತೆ ಹೈ-ಸೆಕ್ಯೂರಿಟಿ ಸೆಲ್ ನಿರ್ಮಾಣ ಮಾಡಲಾಗಿದೆ ಎಂದು ಬಳ್ಳಾರಿ ಜೈಲಿನ ಮೂಲಗಳಿಂದ ತಿಳಿದು ಬಂದಿದೆ.
ಹೈ-ಸೆಕ್ಯೂರಿಟಿ ಸೆಲ್​ಗಳನ್ನು 3 ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಎರಡು ಬದಿಯಲ್ಲಿ ಕನಿಷ್ಟ 30 ಸೆಲ್​ಗಳಿವೆ. ಒಂದು ಕಡೆ 15 ಸೆಲ್​ಗಳಿದ್ದು‌ ಅಲ್ಲಿ ದರ್ಶನ್ ​ಅವರನ್ನು ಇರಿಸಲಾಗುತ್ತದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳನ್ನು ಬಂಧಿಸಿಡಲು‌ ಸಿದ್ದಪಡಿಸಿದ್ದ ಸೆಲ್​ನಲ್ಲಿ ದರ್ಶನ್​ ಅವರನ್ನು ಬಂಧಿಸಿಡಲಾಗುತ್ತದೆ. ಈಗಾಗಲೇ ವಿವಿಧ ಆರೋಪ ಮತ್ತು ಅಪರಾಧಗಳ ಅಡಿ ಬಂಧಿತ 11 ಜನರನ್ನು ಈ ಸೆಲ್​ಗಳಲ್ಲಿ ಇಡಲಾಗಿದೆ. ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಜನರು ಈ ಸೆಲ್​ಗಳಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.


ಬಳ್ಳಾರಿ ಕೇಂದ್ರ ಕಾರಾಗೃಹದ ಒಳಗಡೆ ಯೋಗ ಕೇಂದ್ರ ಇದೆ. ಆದರೆ ಹೈ-ಸೆಕ್ಯೂರಿಟಿ ಸೆಲ್​ನಲ್ಲಿ ಇದು ಇರುವುದಿಲ್ಲ. ಕೇಂದ್ರ ಕಾರಾಗೃಹ ಹಾಗೂ ಈ ಹೈ-ಸೆಕ್ಯೂರಿಟಿ ಸೆಲ್​ಗೆ ಸಂಪರ್ಕ ಇರುವುದಿಲ್ಲ. ಜೈಲ್ ಸಿಬ್ಬಂದಿಗೂ ಸೆಲ್​ನಲ್ಲಿ ಮೊಬೈಲ್ ಬಳಕೆ ನಿಷಿದ್ಧವಾಗಿದೆ. 
 ಪರಪ್ಪನ ಅಗ್ರಹಾರ ಜೈಲಿನಲ್ಲಾದ ಘಟನೆ ಹಿನ್ನೆಲೆಯಲ್ಲಿ ಜೈಲ್ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಸಿಬ್ಬಂದಿ ಮೊಬೈಲ್ ಬಳಕೆ ಮೇಲೆ ಹೆಚ್ಚಿನ‌ ನಿಗಾ ವಹಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟು ನಿಟ್ಟಿನ‌ ಸೂಚನೆ ನೀಡಿದ್ದಾರೆ. ಕೆಲ ಸಿಬ್ಬಂದಿಗಳು ಮನೆಯಲ್ಲಿಯೇ ಮೊಬೈಲ್ ಬಿಟ್ಟು‌ಹೋಗುವ ಸ್ಥಿತಿ ಎದುರಾಗಿದೆ.

ಬಳ್ಳಾರಿ ಜೈಲಿಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ : ನಟ ದರ್ಶನ್ ಅವರನ್ನು ನೋಡಲು ಕ್ಯಾತಸಂದ್ರ ರಸ್ತೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ದರ್ಶನ್ ಅಭಿಮಾನಿಗಳನ್ನು ಜೈಲು ಬಳಿಗೆ ಬಿಡದಂತೆ ದುರ್ಗಮ್ಮಗುಡಿ ಬಳಿಯೇ ಬ್ಯಾರಿಕೇಡ್ ಅಳವಡಿಸಿ, ತಡೆಹಿಡಿಯಲಾಯಿತು. ದರ್ಶನ್ ಆಗಮನವಾಗುತ್ತಿದ್ದಂತೆ ದುರ್ಗಮ್ಮ ಗುಡಿ‌ ಬಳಿ ಜಮಾಯಿಸಿದ್ದ ಅಭಿಮಾನಿಗಳು ಕೇಕೆ ಹಾಕಿದರು.
ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನುವ​ ಫೋಟೋ ವೈರಲ್ ಆದ​ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯವು ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್​ ಅವರನ್ನು ಬಳ್ಳಾರಿಯ ಜೈಲ್​ಗೆ ಶಿಫ್ಟ್​ ಮಾಡಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu