Mangalore- ಲಾಭದ ಆಸೆಗೆ ಬಿದ್ದು 74 ಲಕ್ಷ ರೂ.ಕಳೆದುಕೊಂಡ ಮಂಗಳೂರಿನ ವ್ಯಕ್ತಿ



ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಜಾಹೀರಾತು ನೋಡಿ ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿ 74,18,952 ರೂ. ಮಂಗಳೂರಿನ ವ್ಯಕ್ತಿ ಕಳೆದುಕೊಂಡ  ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ವ್ಯಕ್ತಿ ಮಾ.15ರಂದು ಇನ್‌ಸ್ಟಾಗ್ರಾಂ ನೋಡುತ್ತಿದ್ದಾಗ ಅದರಲ್ಲಿ ಷೇರು ಟ್ರೇಡಿಂಗ್ ಜಾಹೀರಾತು ನೋಡಿದ್ದಾರೆ. ಜಾಹಿರಾತಿನ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಮಾಹಿತಿ ಸಿಕ್ಕಿದೆ. ಅದರಲ್ಲಿದ್ದ ಅಪರಿಚಿತ ವ್ಯಕ್ತಿಯ ಮೊಬೈಲ್‌ನಿಂದ ವಾಟ್ಯಾಪ್ ಲಿಂಕ್ ಬಂದಿದೆ. ಆ ಲಿಂಕ್‌ನ್ನು ತೆರೆದು ನೋಡಿದಾಗ ಅದರಲ್ಲಿ ಗ್ರೂಪ್‌ನ ಲಿಂಕ್ ಕಂಡು ಬಂದಿದೆ. 


ನಂತರ ದೂರುದಾರರನ್ನು ಸದ್ರಿ ಗ್ರೂಪ್ ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್ನಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿಯನ್ನು ನೀಡಿದ್ದಾರೆ. ಏ.25 ರಂದು ಕಂಪನಿಯಿಂದ ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಯಾಪ್ ಮೂಲಕ ಮೆಸೇಜ್ ಬಂದಿದೆ. ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಷೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ.


ಲಾಭದ ಆಸೆ: ಮೊದಲಿಗೆ 10 ಸಾವಿರ ರೂ. ಹಣವನ್ನು ತೊಡಗಿಸಲು ತಿಳಿಸಿ ಇಂಡಸ್ ಇಂಡ್ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಅದರಂತೆ ದೂರುದಾರರು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ 10,000ರೂ. ಹಣವನ್ನು ಪಾವತಿಸಿದ್ದಾರೆ. ನಂತರ ಮಾ.15ರಿಂದ ಜು.4ರ ವರೆಗೆ ದೂರವಾಣಿ ನಂಬ್ರಗಳಿಂದ ವಾಟ್ಸಾಪ್ ಮೇಸೆಜ್ ಮೂಲಕ ಕಂಪನಿ ಯವರು ಎಂದು ಪರಿಚಯಿಸಿಕೊಂಡು ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಲು ಹೇಳಿದ್ದರು.


ದೂರುದಾರರು ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ನಾನಾ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪನಿಯವರಿಗೆ ಪೋನ್ ಪೇ ಮೂಲಕ ಪಾವತಿಸಿರುತ್ತಾರೆ. ನಂತರ ಕಂಪನಿಯಿಂದ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗದೇ ಇದ್ದುದರಿಂದ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu